ಮಂಗಳೂರು: ಪಶ್ಚಿಮ ವಲಯದ ನೂತನ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಆಗಿ ಹಿರಿಯ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರು ನವೆಂಬರ್ 19 ರಂದು ಗುರುವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದರು. ಪ್ರಭಾರ ಐಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಂದ ಶಶಿಕುಮಾರ್ ಅಧಿಕಾರ ದಂಡ ಸ್ವೀಕರಿಸಿದರು.
ಕರ್ನಾಟಕ ಸರ್ಕಾರ ನವೆಂಬರ್ 18 ರಂದು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಲವಾರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಹೊಸ ಹುದ್ದೆಗಾಗಿ ಕಾಯುತ್ತಿದ್ದ ಶಶಿಕುಮಾರ್ ಅವರನ್ನು ಪಶ್ಚಿಮ ವಲಯದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಅವರು ಈ ಹಿಂದೆ ಮಂಗಳೂರು ನಗರ ಮತ್ತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಭಡ್ತಿ ಹೊಂದಿ ಹೊಸ ಹುದ್ದೆಯಲ್ಲಿ ಮತ್ತೆ ಅವರು ಮಂಗಳೂರಿಗೆ ಐಜಿಪಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.













