November 23, 2026
ಕರಾವಳಿಕೃಷಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿರಾಜಕೀಯವರದಿ

ಒಂದು ಜಿಲ್ಲೆಯ ಸಮಸ್ಯೆಗೆ ಮತ್ತೊಂದು ಜಿಲ್ಲೆಯ ಜನರ ಬಲಿ ಬೇಡ; ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಕೈಗೊಂಡಿರುವ ಆನೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಿಂದ ಬೆಳ್ತಂಗಡಿ ತಾಲೂಕಿನ ಜನರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮಾರ್ಗವಾಗಿ ಭದ್ರಾ ಅಭಯಾರಣ್ಯದತ್ತ ಆನೆಗಳನ್ನು ಅಟ್ಟುವ ಕಾರ್ಯಾಚರಣೆಯ ಬಗ್ಗೆ ಸರ್ಕಾರ ಗಂಭೀರವಾಗಿ ಗಮನಹರಿಸಬೇಕು ಎಂದು ಶಾಸಕ ಹರೀಶ್ ಪೂಂಜ ಒತ್ತಾಯಿಸಿದ್ದಾರೆ.

ಭದ್ರಾ ಅಭಯಾರಣ್ಯ, ಕುದುರೆಮುಖ ರಕ್ಷಿತ ಅರಣ್ಯ ಪ್ರದೇಶ ಹಾಗೂ ಚಾರ್ಮಾಡಿ ಘಾಟಿಯ ಅರಣ್ಯ ವಲಯಗಳು ಪರಸ್ಪರ ಸಂಪರ್ಕ ಹೊಂದಿವೆ. ಹೀಗಾಗಿ ಈ ಭಾಗದಲ್ಲಿ ಆನೆಗಳ ಸಂಚಾರ ಹೆಚ್ಚಾದರೆ ಬೆಳ್ತಂಗಡಿ ತಾಲೂಕಿನ ಗ್ರಾಮಗಳಿಗೂ ತೊಂದರೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ, ಮುಂಡಾಜೆ, ತೋಟತ್ತಾಡಿ, ಚಿಬಿದ್ರೆ, ನೆರಿಯ, ಶಿಶಿಲ ಹಾಗೂ ರೆಖ್ಯ ಭಾಗದ ಜನರು ಆತಂಕ ಎದುರಿಸಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಬೆಳ್ತಂಗಡಿ ತಾಲೂಕಿನ ಕೃಷಿಕರು ಕಾಡಾನೆಗಳ ಹಾವಳಿಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಡಿಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗುತ್ತಿದ್ದು, ಕಾಡಾನೆ ದಾಳಿಯಿಂದ ಜೀವಹಾನಿಯೂ ಸಂಭವಿಸಿದೆ. 2025ರಲ್ಲಿ ಸೌತಡ್ಕ ಸಮೀಪದ ಗೂಂಡಿ ಪರಿಸರದಲ್ಲಿ ಬಾಲಕೃಷ್ಣ ಶೆಟ್ಟಿ ಹಾಗೂ 2026ರಲ್ಲಿ ರೆಖ್ಯ ಗ್ರಾಮದ ಮುಚ್ಚಿರಡ್ಕದಲ್ಲಿ ಬಾಲಕೃಷ್ಣ ಗೌಡ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಮತ್ತಷ್ಟು ಆನೆಗಳ ಸಂಚಾರ ಹೆಚ್ಚಾದರೆ ಕೃಷಿಕರ ಬದುಕಿಗೆ ದೊಡ್ಡ ಹೊಡೆತ ಬೀಳಲಿದೆ. ಜನರ ಸುರಕ್ಷತೆಗೂ ಅಪಾಯ ಎದುರಾಗಲಿದೆ.

ಈಗಾಗಲೇ ಸಂಕಷ್ಟದಲ್ಲಿರುವ ಬೆಳ್ತಂಗಡಿ ತಾಲೂಕಿನ ಜನರ ಮೇಲೆ ಮತ್ತೊಂದು ಸಮಸ್ಯೆಯನ್ನು ಹೇರುವುದು ಸರಿಯಲ್ಲ ಎಂದು ಶಾಸಕ ಪೂಂಜಾ ಅಭಿಪ್ರಾಯಪಟ್ಟಿದ್ದಾರೆ.ಹಾಸನ ಜಿಲ್ಲೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಅದಕ್ಕಾಗಿ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರು ಸಂಕಷ್ಟ ಅನುಭವಿಸುವಂತಾಗಬಾರದು. ಆದ್ದರಿಂದ ಚಾರ್ಮಾಡಿ ಘಾಟಿ ಅಥವಾ ಕುದುರೆಮುಖ ಅರಣ್ಯ ವಲಯದ ಮೂಲಕ ಬೆಳ್ತಂಗಡಿ ತಾಲೂಕಿನತ್ತ ಆನೆಗಳನ್ನು ಅಟ್ಟುವ ಅಥವಾ ಸ್ಥಳಾಂತರಿಸುವ ಯಾವುದೇ ಕಾರ್ಯಾಚರಣೆಗೆ ಅವಕಾಶ ನೀಡಬಾರದು. ಈ ಬಗ್ಗೆ ಅರಣ್ಯ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈಗಾಗಲೇ ಆನೆ ಹಾವಳಿಯಿಂದ ತೊಂದರೆಗೊಳಗಾಗಿರುವ ಗ್ರಾಮಗಳಲ್ಲಿ ಆನೆ ಕಂದಕ, ರೈಲ್ವೆ ಬ್ಯಾರಿಕೇಡ್ ಸೇರಿದಂತೆ ಶಾಶ್ವತ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಜನರ ಜೀವ ಮತ್ತು ಕೃಷಿ ಬೆಳೆಗಳನ್ನು ರಕ್ಷಿಸಲು ಅರಣ್ಯ ಇಲಾಖೆ ವಿಶೇಷ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಈ ವಿಚಾರವಾಗಿ ಅರಣ್ಯ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ವನ್ಯಜೀವಿಗಳ ಸಂರಕ್ಷಣೆ ಮುಖ್ಯವಾಗಿದ್ದರೂ ಜನರ ಜೀವ ಮತ್ತು ಕೃಷಿಯ ರಕ್ಷಣೆಯೂ ಸರ್ಕಾರದ ಜವಾಬ್ದಾರಿಯಾಗಿದೆ. ಒಂದು ಜಿಲ್ಲೆಯ ಸಮಸ್ಯೆಗೆ ಮತ್ತೊಂದು ಜಿಲ್ಲೆಯ ಜನರು ಬಲಿಯಾಗಬಾರದು. ಬೆಳ್ತಂಗಡಿ ತಾಲೂಕಿನ ಜನರ ಹಿತಾಸಕ್ತಿ ಮತ್ತು ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಶಾಸಕ ಹರೀಶ್ ಪೂಂಜಾ ಸ್ಪಷ್ಟಪಡಿಸಿದ್ದಾರೆ.

Related posts

ಬೆಳ್ತಂಗಡಿ ಜೆಪಿ ಅಟ್ಟಾಕ್ರ್ಸ್ ಪ್ರಾಯೋಜಕತ್ವದಲ್ಲಿ ತಾಲೂಕು ಮಟ್ಟದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Suddi Udaya

ಶ್ರೀ ಗುರುದೇವ ಸಹಕಾರ ಸಂಘದ 28ನೇ ಶಾಖೆ ಗುರುಪುರ-ಕೈಕಂಬದಲ್ಲಿ ಉದ್ಘಾಟನೆ

Suddi Udaya

ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದಿಂದ ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ ಮತ್ತು ಧಾರ್ಮಿಕ ಸಭೆ

Suddi Udaya

ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ರಂಗೋಲಿ ಸ್ಪರ್ಧೆ

Suddi Udaya

ಮದ್ದಡ್ಕ ಪಡ್ಡೆಲು ನಿವಾಸಿ ಶೀಲಾವತಿ ನಿಧನ

Suddi Udaya
error: Content is protected !!