November 23, 2026
ಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್ ಗೌಡ ಕಲ್ಮಂಜ ಹಾಗೂ ಲೋಕೇಶ್ವರಿ ವಿನಯ ಚಂದ್ರ ಅವರಿಗೆ ಒಕ್ಕಲಿಗ ಗೌಡರ ಸಂಘದಿಂದ ಸನ್ಮಾನ

ಬೆಳ್ತಂಗಡಿ:ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ಉದ್ಯಮಿ, ಕರ್ನಾಟಕ ಸಾವಯವ ಕೃಷಿ ಯೋಜನೆಯ ರಾಜ್ಯ ಆಡಳಿತ ನಿರ್ದೇಶಕ ಹಾಗೂ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮತ್ತು ಹಿರಿಯ ಸಮಾಜ ಸೇವಕಿ, ಒಕ್ಕಲಿಗ ಸಂಘದ ಮಾಜಿ ಸ್ಥಾಪಕ ಸದಸ್ಯೆ ಹಾಗೂ ವಾಣಿ ಶಿಕ್ಷಣ ಸಂಸ್ಥೆಗೆ ‘ವಾಣಿ’ ಎಂದು ಹೆಸರಿಟ್ಟ ಬೆಳ್ತಂಗಡಿಯ ವಲಂಬ್ರ ಮನೆತನದ ಲೋಕೇಶ್ವರಿ ವಿನಯ ಚಂದ್ರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ತಾಲೂಕು ಒಕ್ಕಲಿಗ ಗೌಡರ ಕ್ರೀಡಾಕೂಟದ ಅಂಗವಾಗಿ ಆಯೋಜಿಸಲಾಗಿದ್ದ ಸಮಾಜದ ಬೃಹತ್ ಸಂಭ್ರಮದ ಕಾರ್ಯಕ್ರಮ ‘ಗೌಡರೆ ಗೌಜಿ ಗಮ್ಮತ್’ನಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು.

ಯುವ ವಯಸ್ಸಿನಲ್ಲೇ ಸಂಘದ ನಿರ್ದೇಶಕರಾಗಿ ಸೇವೆ: ಮೋಹನ್ ಗೌಡ ಕಲ್ಮಂಜ ಅವರು ಅತಿ ಕಿರಿಯ ವಯಸ್ಸಿನಲ್ಲಿಯೇ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಂದಿನ ಅಧ್ಯಕ್ಷರಾದ ಸೋಮೇ ಗೌಡ ಹಾಗೂ ಗೌರವಾಧ್ಯಕ್ಷರಾದ ಪದ್ಮ ಗೌಡ ಅವರ ಅವಧಿಯಲ್ಲಿ ಲೋಕೇಶ್ವರಿ ಪೊಸಂದೋಡಿ, ದುಗ್ಗಪ್ಪ ಗೌಡ, ಕುಶಾಲಪ್ಪ ಗೌಡ, ಕೈಕುರೆ ವೆಂಕಟ್ರಮಣ ಗೌಡ ಸೇರಿದಂತೆ ಹಲವು ಹಿರಿಯರೊಂದಿಗೆ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿದ್ದರು. ಐದು ವರ್ಷಗಳ ಅವಧಿ ಪೂರ್ಣಗೊಂಡ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮಂತೆ ಯುವಕರು ಕೂಡ ಅತಿ ಕಿರಿಯ ವಯಸ್ಸಿನಲ್ಲಿಯೇ ಸಂಘದ ನಿರ್ದೇಶಕರಾಗುವ ಅವಕಾಶ ಪಡೆಯಬೇಕು ಎಂಬ ಉದ್ದೇಶದಿಂದ ಯುವ ಪೀಳಿಗೆಗೆ ಅವಕಾಶ ಮಾಡಿಕೊಟ್ಟಿದ್ದರು. ಇದು ಅವರ ನಾಯಕತ್ವ ಗುಣ ಮತ್ತು ಸಂಘಟನೆಯ ಮೇಲಿನ ಕಾಳಜಿಗೆ ಸಾಕ್ಷಿಯಾಗಿದೆ.

ಉದ್ಯಮ, ಕೃಷಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಾಧನೆ: 2011ರಲ್ಲಿ ಕರ್ನಾಟಕ ಸಾವಯವ ಕೃಷಿ ಯೋಜನೆ ಎಂಬ ಸಾವಯವ ಗೊಬ್ಬರ ತಯಾರಿಕಾ ಸಂಸ್ಥೆಯನ್ನು ಸ್ಥಾಪಿಸಿದ ಮೋಹನ್ ಗೌಡ ಅವರು, ಇಂದು ಸಂಸ್ಥೆಯನ್ನು ರಾಜ್ಯದ 12 ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ವಲಯಾಧಿಕಾರಿಗಳು ಹಾಗೂ ಶಾಖೆಗಳ ಮೂಲಕ ಕಾರ್ಯನಿರ್ವಹಿಸುವ ಬೃಹತ್ ಉದ್ಯಮವಾಗಿ ಬೆಳೆಸಿದ್ದಾರೆ. ವಾರ್ಷಿಕವಾಗಿ ಸುಮಾರು 100 ಕೋಟಿ ರೂ. ವಹಿವಾಟು ನಡೆಸುವ ಮಟ್ಟಕ್ಕೆ ಸಂಸ್ಥೆಯನ್ನು ಕೊಂಡೊಯ್ದಿರುವುದು ಅವರ ಉದ್ಯಮಶೀಲತೆಗೆ ಸಾಕ್ಷಿಯಾಗಿದೆ.

ಇದರೊಂದಿಗೆ ಕೃಷಿಯಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಅವರು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿಭೂಮಿಗಳನ್ನು ಹೊಂದಿದ್ದು, ಸುಮಾರು 12 ಸಾವಿರಕ್ಕೂ ಅಧಿಕ ಅಡಿಕೆ ಮರಗಳ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಯುವ ಕಾಂಗ್ರೆಸ್‌ನಿಂದ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉದ್ಯಮ, ಕೃಷಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿನ ಸಾಧನೆ ಗುರುತಿಸಿ ಈ ವರ್ಷದ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಸುರೇಶ್ ಕೌಡಂಗೆ, ನವೀನ್ ಬಿ.ಕೆ.,ಯುವರಾಜ್ ಅನಾರ್, ಕೃಷ್ಣಪ್ಪ ಗೌಡ ಸವಣಾಲು, ನಾರಾಯಣ ಗೌಡ ದೇವಸ್ಯ, ತಾಲೂಕು ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related posts

ರಾಷ್ಟ್ರಮಟ್ಟದ ಕರಾಟೆ ತೀರ್ಪುಗಾರರಾಗಿ ಸೆನ್ಸಾಯ್ ಅಶೋಕ್ ಆಚಾರ್ಯ ನೇಮಕ

Suddi Udaya

ಅಂತರ್ ರಾಜ್ಯ ಖೋ ಖೋ ಪಂದ್ಯಾಟ: ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ನಯನಾಡು ಸ.ಪ್ರೌ. ಶಾಲೆ ವಿದ್ಯಾರ್ಥಿಗಳು

Suddi Udaya

ಎಸ್‌ಡಿಎಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ: 25 ವರ್ಷಗಳ ಹಿಂದೆ ಕಲಿತ ಹಿರಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮಾವೇಶ

Suddi Udaya

ಬುರುಡೆ ಪ್ರಕರಣ: ನಾಲ್ಕು ಮಂದಿ ಎಸ್.ಐ.ಟಿ ವಿಚಾರಣೆಗೆ ಹಾಜರಾಗದ ಕಾರಣ ವಿನಾಯಿತಿ ಕೇಳಿದ ವಕೀಲರು

Suddi Udaya

ಕೊಯ್ಯೂರು ಸ.ಹಿ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಖೋ-ಖೋ ಪಂದ್ಯಾಟ

Suddi Udaya

ವಿ.ಹಿಂ.ಪ. ಭಜರಂಗದಳ ಮದ್ದಡ್ಕ ಘಟಕ ವತಿಯಿಂದ ಅಶಕ್ತ ಕುಟುಂಬಕ್ಕೆ ಧನ ಸಹಾಯ ವಿತರಣೆ

Suddi Udaya
error: Content is protected !!