
ಬೆಳ್ತಂಗಡಿ : ಸಂವಿಧಾನವೇ ಭಾರತದ ಆತ್ಮ, ಸಮಾನತೆ ಮತ್ತು ಮಾನವ ಹಕ್ಕುಗಳ ರಕ್ಷಾಕವಚ – ವಿಶೇಷ ಮಕ್ಕಳಿಗೆ ಸಂವಿಧಾನದ ಅರಿವು ದಯಾ ವಿಶೇಷ ಶಾಲೆಯಲ್ಲಿ ನ. 26 ರಂದು ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಸಂವಿಧಾನದ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಸಂಚಾಲಕರಾದ ವಂ.ಫಾ.ವಿನೋದ್ ರವರು ಅಧ್ಯಕ್ಷತೆ ಮಾತಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಸಭೆಯು ಸುದೀರ್ಘ ಚರ್ಚೆ ಹಾಗೂ ಪರಿಶ್ರಮದ ಮೂಲಕ ಭಾರತದ ಸಂವಿಧಾನವನ್ನು ರೂಪಿಸಿತು. 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು ಹಾಗೂ 1950ರ ಜನವರಿ 26ರಂದು ಜಾರಿಗೆ ತರಲಾಯಿತು.
ಭಾರತವು ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಹಾಗೂ ಪಂಗಡಗಳಿಗೆ ಸೇರಿದ ಜನರು ವಾಸಿಸುವ ವೈವಿಧ್ಯಮಯ ರಾಷ್ಟ್ರವಾಗಿದೆ. ಇಂತಹ ವೈವಿಧ್ಯತೆಯ ನಡುವೆ ಎಲ್ಲರೂ ಸಮಾನತೆಯಿಂದ, ಸಹಬಾಳ್ವೆಯಿಂದ ಬದುಕಲು ಸಂವಿಧಾನವು ಭದ್ರವಾದ ಅಡಿಪಾಯವಾಗಿದೆ. ಸಂವಿಧಾನವೆಂಬುದು ಕೇವಲ ಕಾನೂನುಗಳ ಪುಸ್ತಕವಲ್ಲ; ಅದು ನಮ್ಮ ಭಾರತ ದೇಶದ ಆತ್ಮವಾಗಿದೆ. ದೇಶದ ಏಕತೆ, ಅಖಂಡತೆ, ಪ್ರಜಾಪ್ರಭುತ್ವ ಹಾಗೂ ನಾಗರಿಕರ ಹಕ್ಕುಗಳನ್ನು ಕಾಪಾಡುವ ಮಹತ್ವದ ಶಕ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಮಾತನಾಡುತ್ತಾ, ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸುವುದರ ಜೊತೆಗೆ ಅದರ ಆಶಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾನತೆ, ಮಾನವೀಯತೆ, ಸಹೋದರತ್ವ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕರು, ಮುಖ್ಯ ಶಿಕ್ಷಕರು, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂವಿಧಾನವನ್ನು ತಿಳಿಯೋಣ, ಹಕ್ಕುಗಳನ್ನು ಗೌರವಿಸೋಣ, ಕರ್ತವ್ಯಗಳನ್ನು ಪಾಲಿಸೋಣ ಹಾಗೂ ಸಮಾನತೆ ಮತ್ತು ಮಾನವೀಯತೆಯ ಭಾರತವನ್ನು ನಿರ್ಮಿಸೋಣ ಎಂಬ ಸಂದೇಶದೊಂದಿಗೆ ದಯಾ ವಿಶೇಷ ಶಾಲೆಯ ಸಂವಿಧಾನ ದಿನಾಚರಣೆ ಯಶಸ್ವಿಯಾಗಿ ನೆರವೇರಿತು.









