November 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ವಾರ್ಷಿಕ ಕ್ರೀಡಾಕೂಟ

ಬೆಳ್ತಂಗಡಿ: ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ತಂಡ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ಇದರ 2026-27ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ನ. 28ರಂದು ಶಾಲಾ ಮೈದಾನದಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು.

ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದೊಂದಿಗೆ ಗಣ್ಯರನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಶಿಸ್ತಿನಿಂದ ಸಾಗಿದ ಪಥಸಂಚಲನವು ಕ್ರೀಡಾಕೂಟಕ್ಕೆ ವಿಶೇಷ ಮೆರುಗು ನೀಡಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆಯ ಮುಖ್ಯ ಗ್ರಂಥಪಾಲಕರು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ರಜತಾ ಪಿ. ಶೆಟ್ಟಿ, ಎಸ್‌ಡಿಎಂ ಆಸ್ಪತ್ರೆ, ಉಜಿರೆಯ ಸಲಹಾ ವೈದ್ಯರು ಹಾಗೂ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಸಾತ್ವಿಕ್, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಕೆ. ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೇಮಲತಾ ಎಂ. ಆರ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಡಾ. ಸಾತ್ವಿಕ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ನಾಯಕತ್ವ ಗುಣ, ಆತ್ಮವಿಶ್ವಾಸ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಯುತ್ತದೆ. ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.ಮುಖ್ಯ ಅತಿಥಿಗಳಾದ ಡಾ. ರಜತಾ ಪಿ. ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಶಾಲೆಯ ಶಿಕ್ಷಕ ವೃಂದವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡೆಯು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ದೃಢತೆ, ಶಿಸ್ತು, ಸಮಯಪ್ರಜ್ಞೆ, ಪರಸ್ಪರ ಸಹಕಾರ ಹಾಗೂ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.ಕ್ರೀಡಾಕೂಟದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ವಯೋಮಾನದ ವಿಭಾಗಗಳಲ್ಲಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ, ಹುಮ್ಮಸ್ಸು ಹಾಗೂ ಕ್ರೀಡಾಸ್ಫೂರ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಚುರುಕುತನ, ದೈಹಿಕ ಸಾಮರ್ಥ್ಯ, ಪರಿಶ್ರಮ, ಆತ್ಮವಿಶ್ವಾಸ ಹಾಗೂ ತಂಡದ ಒಗ್ಗಟ್ಟು ಅನಾವರಣಗೊಂಡಿತು.ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ಸುಗಮ ನಿರ್ವಹಣೆ ಹಾಗೂ ತೀರ್ಪುಗಾರಿಕೆಯಲ್ಲಿ ಸಹ ಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕರಾದ ಉಜಿರೆಯ ಎಸ್‌ಡಿಎಂ ಬಿ.ವೈ.ಎನ್.ಎಸ್. ಕಾಲೇಜಿನ ಧರ್ಮೇಂದ್ರ, ಎಸ್‌ಡಿಎಂ ಜನಾರ್ದನ ಶಾಲೆಯ ಪರಮೇಶ್ವರ್, ಎಸ್‌ಡಿಎಂ ಈಜು ತರಬೇತುದಾರರಾದ ಚರಣ್ ಮತ್ತು ಶೀನಾ, ಎಸ್‌ಡಿಎಂ ಸಿಬಿಎಸ್‌ಇ ಶಾಲೆಯ ರಾಜಮ್ಮ, ಎಸ್‌ಡಿಎಂ ಸೆಕೆಂಡರಿ ಶಾಲೆಯ ಹೇಮೇಂದ್ರ ಹಾಗೂ ಎಸ್‌ಡಿಎಂ ಮಾದರಿ ಶಾಲೆ, ಉಜಿರೆಯ ಗಣೇಶ್ ಅವರು ಸಹಕರಿಸಿದರು.ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದ ತೀರ್ಪುಗಾರರಾಗಿ ಧರ್ಮಸ್ಥಳ ಶಾಲೆಯ ವಿಕಾಸ್ ಅರಿಗ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಾದರಿ ಶಾಲೆ, ಉಜಿರೆಯ ಎನ್‌ಸಿಸಿ ಅಧಿಕಾರಿ ವಿವೇಕ್ ಜೈನ್ ಅವರು ಆಗಮಿಸಿ ಸಹಕರಿಸಿದರು.ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ವಂದನಾರ್ಪಣೆಯನ್ನು ಶಿಕ್ಷಕ ಮುರಳಿ ಪಿ. ಅವರು ನಿರ್ವಹಿಸಿದರು. ಶಾಲೆಯ ಕ್ರೀಡಾ ಮಂತ್ರಿ ಜಸ್ವಿತ ಅವರು ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು.ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಸ್‌ಡಿಎಂ ಆಸ್ಪತ್ರೆಯ ದಾದಿಯರು ಆರೋಗ್ಯ ಸೇವೆ ಹಾಗೂ ತುರ್ತು ವೈದ್ಯಕೀಯ ನೆರವಿಗಾಗಿ ಸಹಕರಿಸಿದರು.ಕ್ರೀಡಾಕೂಟದ ಯಶಸ್ವಿ ಆಯೋಜನೆ ಹಾಗೂ ವ್ಯವಸ್ಥಿತ ನಿರ್ವಹಣೆಯಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ್ ಎನ್. ಪೂಜಾರಿ ಅವರ ಪಾತ್ರ ಮಹತ್ವದ್ದಾಗಿತ್ತು. ಅವರ ಸಮರ್ಪಿತ ಸೇವೆ, ಮಾರ್ಗದರ್ಶನ ಹಾಗೂ ಯೋಜನಾಬದ್ಧ ಕಾರ್ಯನಿರ್ವಹಣೆಯಿಂದ ಕ್ರೀಡಾಕೂಟವು ಅಚ್ಚುಕಟ್ಟಾಗಿ ನೆರವೇರಿತು. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ವಾರ್ಷಿಕ ಕ್ರೀಡಾಕೂಟವು ಯಶಸ್ವಿಯಾಗಿ ಸಂಪನ್ನಗೊಂಡಿತು.

Related posts

ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಸ್ಪಂದನಾ ವಿಜಯರಾಘವೇಂದ್ರ ಪಾರ್ಥೀವ ಶರೀರದ ದರ್ಶನ ಪಡೆದ ಶಾಸಕ ಹರೀಶ್ ಪೂಂಜ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ಬೆಂಗಳೂರಿನ ಲೆಕ್ಕ ಪರಿಶೋಧಕರಾದ ಪ್ರೇಮನಾಥ ಹೆಗಡೆ, ಸಿದ್ದಾರ್ಥ ರವರಿಂದ ಕಾಯರ್ತ್ತಡ್ಕ ಹಿ.ಪ್ರಾ. ಶಾಲೆಗೆ ಅನ್ನ ಬಡಿಸುವ ಗಾಡಿ ಕೊಡುಗೆ

Suddi Udaya

ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನ: ಅ.15 ಬ್ರಹ್ಮಕಲಶೋತ್ಸವ ಸಮಿತಿ ರಚನೆಗೆ ಭಕ್ತಾದಿಗಳ ಸಮಾಲೋಚನಾ ಸಭೆ

Suddi Udaya

ಶಿಶಿಲ: ತುಳುನಾಡ ನರ್ಸರಿಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!