November 28, 2026
Uncategorized

ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿ: ವಿವಿಧತೆ, ನಿರಂತರತೆ ಮತ್ತು ಬದ್ಧತೆಯ 300 ಮಾಸಗಳ ಯಶೋಗಾಥೆ-ಪತ್ರಿಕಾಗೋಷ್ಠಿ

ಮಂಗಳೂರು: ಕಲಾಂಗಣದಲ್ಲಿ ಕಲೆ, ಸಂಸ್ಕೃತಿಯ ನಾದ ಅನುರಣಿಸಬೇಕು. ಪ್ರತಿಭೆಗಳಿಗೆ ವೇದಿಕೆ ಲಭಿಸಬೇಕು. ನಾಟ್ಯ, ನಾಟಕ, ಜನಪದ, ಸಂಗೀತ ಇತ್ಯಾದಿ ಕೊಂಕಣಿ ಸಾದರ ಕಲೆಗಳು ಪ್ರಯೋಗ-ಪ್ರದರ್ಶನಗಳ ಮೂಲಕ ಜನಮಾನಸ ತಲುಪಬೇಕು. ಇವುಗಳ ಮೂಲಕ ಕೊಂಕಣಿ ಉಳಿಯಬೇಕು ಮತ್ತು ಬೆಳೆಯಬೇಕು ಎಂಬ ಆಶಯದೊಡನೆ ಆರಂಭಿಸಿದ ಮ್ಹಯ್ನ್ಯಾಳಿ ಮಾಂಚಿ (ತಿಂಗಳ ವೇದಿಕೆ) ಸರಣಿಯು 300 ತಿಂಗಳ ಯಶೋಗಾಥೆಯನ್ನು ದಾಖಲಿಸಿದೆ. 25 ವರ್ಷಗಳ ನಿರಂತರತೆ, ಸಮಗ್ರ ಕೊಂಕಣಿಗರನ್ನು ಪ್ರತಿನಿಧಿಸುವ ಕಲಾಪ್ರಕಾರಗಳ, ಭಾಷಾ ಪ್ರಬೇಧಗಳ, ಪ್ರದೇಶಗಳ ವಿವಿಧತೆ ಈ ಪಯಣವನ್ನು ಸುಂದರಗೊಳಿಸಿದೆ.
2001 ಡಿಸೆಂಬರ್ 01 ರಂದು ಪ್ರಸಿದ್ಧ ಹಿಂದಿ ಚಿತ್ರ ನಟ ನಾಸಿರುದ್ದೀನ್ ಶಹಾ ಇಲ್ಲಿ ಕಲೆ ಸಂಸ್ಕೃತಿ ಬೆಳಗಲಿ ಎಂದು ಹಾರೈಸಿ ಕಲಾಂಗಣದ ಬಯಲು ರಂಗಮಂದಿರವನ್ನು ಲೋಕಾರ್ಪಣೆಗೊಳಿಸಿದರು. ನಂತರ 2002 ಜನವರಿ 06 ರಿಂದ ಮೊದಲ್ಗೊಂಡು ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ 6.30 ಗಂಟೆಗೆ ಸರಿಯಾಗಿ ಕಲಾಂಗಣದ ನೋರಿನ್ ಮತ್ತು ರೊನಾಲ್ಡ್ ಮೆಂಡೊನ್ಸಾ ಬಯಲು ರಂಗ ಮಂದಿರದಲ್ಲಿ ಹಾಗೂ ಮಳೆಗಾಲದ ಸಮಯದಲ್ಲಿ ಗ್ರೇಸಿ ಗಂಗಾ ನಾಯ್ಕ್ ಬಂದೋಡ್ಕರ್ ಸಭಾಂಗಣದ ಲುವಿಜಾ ಮತ್ತು ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ವೇದಿಕೆಯಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ವಿಕ್ಟೋರಿಯಾ ವೀಣಾ ಕೊರೆಯಾ ವೇದಿಕೆಯಲ್ಲಿ ಕೊಂಕಣಿ ನೃತ್ಯಗಳು ನಲಿದಿವೆ, ಸಂಗೀತ ಉಲಿದಿದೆ, ನಾಟಕಗಳು ನಡೆದಿವೆ, ಜನಪದ ಕುಣಿದಿದೆ.
ನಿರಂತರತೆಯ ಬದ್ಧತೆ: ಆರಂಭಿಸಿದ ಸಂಗತಿಯನ್ನು ಮುಂದುವರಿಸಿ ಕೊಂಡೊಯ್ಯುವ ಬದ್ಧತೆ ಇದ್ದಲ್ಲಿ ಮಾತ್ರ ದಾಖಲೆಗಳು ನಿರ್ಮಾಣವಾಗುತ್ತವೆ. ನೃತ್ಯ, ನಾಟಕ, ಸಂಗೀತ, ಜನಪದ ವಲ್ಲದೇ ಕೊಂಕಣಿ ಯಕ್ಷಗಾನ, ಮಕ್ಕಳ ರಜಾ ಶಿಬಿರದ ರಚನೆಗಳು, ಕಲಾಕುಲ್ ನಾಟಕ ರೆಪರ್ಟರಿಯ ಪ್ರಯೋಗಗಳು, ಗೋವಾದ ತಿಯಾತ್ರ್, ಜಮ್ನಿವೆಲೊ ಖೆಳ್, ದಿವ್ಯಾ ಖೆಳ್, ಘೊಡ್ಯಾ ಮೊಡ್ನಿ, ಜಾಗೊರ್‌, ಮಾಂಡೊ, ದುಲ್ಪೊದಾಂ ಇತ್ಯಾದಿ ಪ್ರಕಾರಗಳು, ಹಾಸ್ಯಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮಗಳು, ಯುವ ಜನತೆಯನ್ನು ಆಕರ್ಷಿಸಿಸುವ ಯುವ ಮಹೋತ್ಸವಗಳು, ಕ್ರೈಸ್ತ, ಜಿ ಎಸ್‌ ಬಿ, ಕುಡ್ಮಿ, ಖಾರ್ವಿ, ಸಿದ್ದಿ, ದಾಲ್ದಿ, ನವಾಯತಿ, ಹೀಗೆ ವಿವಿಧ ಭಾಷಾ ಪ್ರಕಾರಗಳ ಗುಮಟ್‌, ಚೂಡಿಪುಜಾ, ಉಜ್ಯಾ ಖೆಳ್‌, ದಮಾಮ್‌, ಫುಗ್ಡಿ, ತೊಣಿಯೊ, ದೊರಿ ಖೆಳ್‌, ದಪ್‌ ಇತ್ಯಾದಿ ಜನಪದ ವಿಶೇಷತೆಗಳು, ಜ್ಞಾನಪೀಠ ಪುರಸ್ಕೃತ ಹಾಗೂ ಇತರ ಕೊಂಕಣಿ ಸಾಹಿತಿಗಳ ಪ್ರಸಿದ್ಧ ಕೃತಿಗಳ ರಂಗ ಪ್ರಯೋಗಗಳು ಕೊಂಕಣಿ ಕಲೆಯನ್ನು ಶ್ರೇಷ್ಟತೆಯೆಡೆಗೆ ಕೊಂಡೊಯ್ಯುವ ಕೆಲಸ ನಿರಂತರ ಸಾಗುತ್ತಾ ಬಂದಿದೆ. ಕೊಂಕಣಿಯ ಎಲ್ಲಾ ಭಾಷಾ ಪ್ರಬೇಧಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕಲಾವಿದರಿಗೆ ಗೌರವ: ಕಲಾವಿದರಿಗೆ ಗೌರವ ಸಲ್ಲಿಸುವಲ್ಲಿ ಮಾಂಡ್ ಸೊಭಾಣ್ ಮುಂಚೂಣಿಯಲ್ಲಿದೆ. ತಿಂಗಳ ವೇದಿಕೆ ಸರಣಿಗೆ ಆಯ್ಕೆಯಾದ ತಂಡಗಳಿಗೆ ಸೂಕ್ತ ಗೌರವ ಸಂಭಾವನೆ, ದೂರದೂರಿನ ತಂಡಗಳಿಗೆ ಪ್ರಯಾಣ, ವಸತಿ ಮತ್ತು ಊಟೋಪಚಾರ, ಕಾರ್ಯಕ್ರಮಕ್ಕೆ ಸೂಕ್ತ ಧ್ವನಿ ಬೆಳಕು ಮತ್ತು ಪ್ರಚಾರ ಹಾಗೂ ಪ್ರೇಕ್ಷಕರ ವ್ಯವಸ್ಥೆ ಮಾಡಲಾಗುತ್ತದೆ.
ಮಾಂಡ್ ಸೊಭಾಣ್ ಸಂಸ್ಥೆಯ ಸ್ಥಾಪಕ ದಿ. ಎರಿಕ್ ಒಝೇರಿಯೊರವರ ಆಶಯದಂತೆ ಅಧ್ಯಕ್ಷ ಲುವಿ ಪಿಂಟೊ ರವರ ನೇತೃತ್ವದ ಸಮಿತಿಯ ಸಹಕಾರದಲ್ಲಿ ಕಲಾಂಗಣ ಕಲೆಯ ಅಂಗಣವಾಗಿ, ಕಲೆಗಳು ಕುಣಿದಾಡುವ ಆಡುಂಬೊಲವಾಗಿ, ಪ್ರೇಕ್ಷಕರ ಹೃನ್ಮನ ಸೆಳೆಯುವ ಚುಂಬಕ ಶಕ್ತಿಯಾಗಿ ಬೆಳೆಯುತ್ತಿದೆ. ಕೊಂಕಣಿಗೆ ತನ್ನ ಕೊಡುಗೆ ನೀಡುತ್ತಿದೆ.
300 ನೇ ಕಾರ್ಯಕ್ರಮ – ದಿ ಗ್ರೇಟ್ ಬಾಯ್ಲಾ ಇಂಟರ್ ನ್ಯಾಶನಲ್ ಶೋ: ಬಾಯ್ಲಾ ಹಾಡುಗಳು ಹಾಗೂ ನೃತ್ಯ ಕೊಂಕಣಿ ಕಲೆಯ ಅಸ್ಮಿತೆ. ಬಾಯ್ಲಾದು ಎಂಬ ಪೋರ್ಚುಗೀಸ್‌ ಶಬ್ದದಿಂದ ಉತ್ಪತ್ತಿಯಾದ ಬಾಯ್ಲಾ ಶಬ್ದದ ಅರ್ಥ ನರ್ತಿಸು. ದುಲ್ಪದ್‌, ಪೊಲ್ಕಾ ನೃತ್ಯ ಪ್ರಕಾರಗಳಿಂದ ಉದಿಸಿದ ಬಾಯ್ಲಾವನ್ನು ಮಾಂಡ್‌ ಸೊಭಾಣ್‌ ಪ್ರಚುರಪಡಿಸಿತು. ವಿಶ್ವದ ಪ್ರಥಮ ಬಾಯ್ಲಾ ಶೋ, ಬಿಗ್‌ ಬಾಯ್ಲಾ ಶೋ, ಬಾಯ್ಲಾ ಕಾರ್ನಿವಲ್‌, ಬಾಯ್ಲಾ ಫೆಸ್ಟಿವಲ್‌, ಬಾಯ್ಲಾ ಅರೇಬಿಯಾ, ಲಿಯೊ ಬಾಯ್ಲಾ ಶೋ, ಹಾಗೂ ಬಾಯ್ಲಾ ನೃತ್ಯ ಸ್ಪರ್ಧೆಗಳನ್ನು ನಡೆಸಿ ಬಾಯ್ಲಾ ನೃತ್ಯ ಪ್ರಕಾರವನ್ನು ಜನರೆಡೆಗೆ ಒಯ್ದಿತು. ಇಂದು ಯಾವುದೇ ಕೊಂಕಣಿ ಸಂಭ್ರಮಗಳು ಬಾಯ್ಲಾ ನೃತ್ಯವಿಲ್ಲದೆ ಕೊನೆಗಾಣವು. ಬಾಯ್ಲಾ ಪ್ರಕಾರವು ಭಾರತ ಮಾತ್ರವಲ್ಲದೇ ಶ್ರೀಲಂಕಾ, ಮೊರಿಶಸ್, ಲ್ಯಾಟಿನ್‌ ಅಮೇರಿಕಾ ದೇಶಗಳಲ್ಲಿ ಇದೆ.
ದುಬಾಯಿಯ ಪ್ರಖ್ಯಾತ ಗಿಟಾರ್ ಮಾಯೆಸ್ಟ್ರೊ ಆಲ್ವಿನ್ ಫೆರ್ನಾಂಡಿಸ್ ಈ ಸಂಗೀತ ಕಾರ್ಯಕ್ರಮವನ್ನು ನಿರ್ದೇಶಿಸಲಿದ್ದು, ಅಂತರರಾಷ್ಟ್ರೀಯ ಖ್ಯಾತಿಯ ಎಲ್ಲೋ ಬೀಟ್ಸ್ ತಂಡವು ಶ್ರೀಲಂಕಾದಿಂದ ಆಗಮಿಸಲಿದೆ. ಹಳೆಯ ಬಾಯ್ಲಾ ಹಾಡುಗಳು ಮನರಂಜಿಸಲಿದ್ದು, ಇದಕ್ಕಾಗಿಯೇ ರಚಿಸಿದ ಕೆಲ ನೂತನ ಹಾಡುಗಳು ಕೇಳುಗರನ್ನು ಕುಣಿಸುವುದರಲ್ಲಿ ಸಂಶಯವಿಲ್ಲ. ನಾಚ್ ಸೊಭಾಣ್ ಮತ್ತು ಅರ್ಬನ್ ಗ್ರೂವ್ ತಂಡಗಳ ನೃತ್ಯವಿದೆ. ಯುವಜನರು ಮತ್ತು ನೃತ್ಯಾಸಕ್ತರಿಗಾಗಿ ನೃತ್ಯ ವೇದಿಕೆ ಇರಲಿದೆ. ವೆಂಜ್‌ ಮಾಡೆಲಿಂಗ್‌ ಅಕಾಡೆಮಿಯ ವಿದ್ಯಾರ್ಥಿಗಳು ಕೊಂಕಣಿ ಸಾಂಪ್ರದಾಯಿಕ ಉಡುಗೆಯ ರೂಪದರ್ಶಿ ನಡಿಗೆ (fashion walk) ಹಾಗೂ ನೃತ್ಯ ಪ್ರದರ್ಶಿಸಲಿದ್ದಾರೆ.
06 ಡಿಸೆಂಬರ್ 2026 ಸಂಜೆ 6.00 ಗಂಟೆಗೆ ಸರಿಯಾಗಿ ಕಲಾಂಗಣ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಉದ್ಯಮಿ ಹಾಗೂ ದಾನಿ ಆಸ್ಟಿನ್‌ ರೋಚ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ.
ಬನ್ನಿ, ಕೊಂಕಣಿ ಸಂಗೀತ ಸಂಭ್ರಮಿಸೋಣ, ಬನ್ನಿ ನಿರಂತರತೆಯ ದಾಖಲೆಗೆ ಸಾಕ್ಷಿಯಾಗೋಣ.

ಪತ್ರಿಕಾಗೋಷ್ಠಿಯು ನ.27ರಂದು ಬ್ಯಾಂಕ್ವೆಟ್ ಹಾಲ್, ಹೋಟೆಲ್ ಗೋಲ್ಡ್ಫಿಂಚ್‌ನಲ್ಲಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಲುವಿ ಪಿಂಟೊ (ಅಧ್ಯಕ್ಷರು, ಮಾಂಡ್ ಸೊಭಾಣ್), ಆಲ್ವಿನ್ ಫೆರ್ನಾಂಡಿಸ್ (ನಿರ್ದೇಶಕರು, ದಿ ಗ್ರೇಟ್ ಬಾಯ್ಲಾ ಇಂಟರ್ ನ್ಯಾಶನಲ್ ಶೋ), ರೊಯ್ ಕ್ಯಾಸ್ತೆಲಿನೊ (ಕಲಾಂಗಣ ಪಿರ್ಜೆಂತ್), ಸ್ಟಾö್ಯನಿ ಆಲ್ವಾರಿಸ್ (ಸಂಘಟಕ, ಮಾಂಡ್ ಸೊಭಾಣ್), ರೊನಾಲ್ಡ್ ಕ್ರಾಸ್ತಾ (ಕಾರ್ಯದರ್ಶಿ, ಮಾಂಡ್ ಸೊಭಾಣ್), ನವೀನ್ ಲೋಬೊ (ಉಪಾಧ್ಯಕ್ಷ, ಮಾಂಡ್ ಸೊಭಾಣ್), ಎಲ್ರೊನ್ ರೊಡ್ರಿಗಸ್ (ಖಜಾಂಚಿ, (ಮಾಂಡ್ ಸೊಭಾಣ್) ಹಾಜರಿದ್ದರು.

Related posts

ಬೆಳ್ತಂಗಡಿ ಗಣೇಶ್ ಹೋಟೆಲ್ ನ ಮಾಲಕ ದಿವಾಕರ ಪ್ರಭು ನಿಧನ

Suddi Udaya

ಎಸ್‌ಎನ್ ಮೂಡಬಿದ್ರಿ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಞವಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ಉದ್ಘಾಟನೆ

Suddi Udaya

ಡಾ. ಶಿವರಾಮ ಕಾರಂತ ಪ್ರಶಸ್ತಿಗೆ ಕಾಶಿಪಟ್ಣ ಗ್ರಾಮ ಪಂಚಾಯತ್ ಆಯ್ಕೆ

Suddi Udaya

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿದ 17ನೇ ಬಜೆಟ್ ಸರ್ವರಿಗೂ ಸಮಪಾಲು ನೀಡಿರುವ ಐತಿಹಾಸಿಕ ಬಜೆಟ್: ರಕ್ಷಿತ್ ಶಿವರಾಂ

Suddi Udaya

ಶಿಬಾಜೆ ಶ್ರೀ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

Suddi Udaya
error: Content is protected !!