November 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪಾತಾಳಕ್ಕಿಳಿದ ಅಂತರ್ಜಲಕ್ಕೆ ಜೀವಕಳೆ ತುಂಬಿದ ಭಗೀರಥ; ಬೋರ್‌ವೆಲ್ ಜಲಮರುಪೂರಣದಲ್ಲಿ ರೈತ ಮಾದರಿಯಾದ ಕುರ್ತೊಡಿಗುತ್ತು ಶೈಲೇಶ್ ಕುಮಾರ್

ಬೆಳ್ತಂಗಡಿ: ಮೆಲಂತಬೆಟ್ಟು ಗ್ರಾಮದ ಸುತ್ತಮುತ್ತಲಿನ ಸುಮಾರು 10-15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದು ಕೃಷಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ನೀರಿನ ಹುಡುಕಾಟದಲ್ಲಿ ಈ ಭಾಗದ ಹತ್ತು ಹಲವಾರು ರೈತರು 600-900 ಅಡಿಗಳಿಗೂ ಹೆಚ್ಚಿನ ಆಳಕ್ಕೆ ಬೋರ್‌ವೆಲ್ ಕೊರೆದರೂ ನೀರು ಕಡಿಮೆ ಆಗಿ ನಿರಾಶೆ ಅನುಭವಿಸುವಂತಹ ಕಠಿಣ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈಗಾಗಲೇ ಇದ್ದ ಈಭಾಗ ಕೃಷಿಕರ ಕೆಲವು ಬೋರ್‌ವೆಲ್‌ಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದರಿಂದ ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿತ್ತು. ಹೊಸ ಬೋರ್‌ವೆಲ್ ಕೊರೆದರೂ ಯಶಸ್ಸು ಸಿಗದ ಸ್ಥಿತಿಯಲ್ಲಿ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಅನಿವಾರ್ಯತೆ ಇಡೀ ಊರಿಗೆ ಎದುರಾಗಿತ್ತು.

ಇಂತಹ ಸಂಕಷ್ಟದ ನಡುವೆಯೇ ಪ್ರಗತಿಪರ ರೈತ ಹಾಗೂ ಉದ್ಯಮಿ ಕುರ್ತೊಡಿಗುತ್ತು ನಿವಾಸಿ ಕೃಷಿಕ ಶೈಲೇಶ್ ಕುಮಾರ್ ಅವರು ತಮ್ಮ ಜಮೀನಿನ ಮೂಲೆಯಲ್ಲೊಂದು ನೈಸರ್ಗಿಕ ನೀರಿನ ಒರತೆಯನ್ನು ಗುರುತಿಸಿದರು. ಆ ಒರತೆಯ ಮಹತ್ವವನ್ನು ಅರಿತ ಅವರು, ತಕ್ಷಣವೇ ಆ ಜಾಗವನ್ನು ಅಗೆದು ಸುಂದರವಾದ ಕೆರೆಯೊಂದನ್ನು ನಿರ್ಮಿಸಿದರು. ವಿಶೇಷವೆಂದರೆ, ಈ ಕೆರೆಯಲ್ಲಿ ವರ್ಷಪೂರ್ತಿ ನೀರಿನ ಒರತೆ ಜೀವಂತವಾಗಿದ್ದು, ಸುಡುವ ಬೇಸಿಗೆಕಾಲದಲ್ಲೂ ನೀರು ಬತ್ತದೆ ಇರುವುದು ಅಚ್ಚರಿಯ ವಿಷಯ. ಪ್ರಕೃತಿಯ ಈ ವರದಾನವನ್ನು ಸರಿಯಾಗಿ ಬಳಸಿಕೊಂಡ ಶೈಲೇಶ್ ಅವರು, ಅಂತರ್ಜಲ ಸಂರಕ್ಷಣೆಯ ದಿಸೆಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟರು.

ಗುರುತ್ವಾಕರ್ಷಣೆ ವಿನೂತನ ತಂತ್ರ ಬಳಕೆ ಮಳೆಗಾಲದಲ್ಲಿ ಕೆರೆ ತುಂಬಿ ತುಳುಕುವ ಸಮುದ್ರ ಸೇರುವ ನೀರನ್ನು ವ್ಯರ್ಥವಾಗದಂತೆ ತಡೆಯಲು ಕುರ್ತೊಡಿಗುತ್ತು ಶೈಲೇಶ್ ಕುಮಾರ್ ಅವರು ವಿನೂತನ ತಂತ್ರವನ್ನು ಅಳವಡಿಸಿಕೊಂಡರು. ಕೆರೆಯಿಂದ ಪೈಪ್ ಅಳವಡಿಸಿ, ಗುರುತ್ವಾಕರ್ಷಣೆಯ (ಗ್ರಾವಿಟಿ ಡೈರೆಕ್ಷನ್) ಸಹಾಯದಿಂದ ಕೆರೆಯ ಕೆಳಭಾಗದಲ್ಲಿರುವ ಎರಡು ಬೋರ್‌ವೆಲ್‌ಗಳಿಗೆ ನೇರವಾಗಿ ಶುದ್ಧವಾದ ನೀರನ್ನು ಹರಿಯುವಂತೆ ವ್ಯವಸ್ಥೆ ಮಾಡಿದರು. ಯಾವುದೇ ದುಬಾರಿ ಯಂತ್ರೋಪಕರಣಗಳಿಲ್ಲದೆ, ಅತ್ಯಂತ ಕಡಿಮೆ ಅಥವಾ ಯಾವುದೇ ಹೆಚ್ಚುವರಿ ಖರ್ಚಿಲ್ಲದೆ ರೂಪಿಸಿದ ಈ ಸರಳ ಹಾಗೂ ಪರಿಣಾಮಕಾರಿ ಜಲಮರುಪೂರಣ ಯೋಜನೆ ಈಗ ಇಡೀ ಭಾಗದ ಗಮನ ಸೆಳೆದಿದೆ. ಬೋರ್‌ವೆಲ್‌ಗಳಿಗೆ ನಿರಂತರ ಜಲಪೂರಣ ಕಳೆದ 10-12 ವರ್ಷಗಳಿಂದ ಈ ಎರಡು ಬೋರ್‌ವೆಲ್‌ಗಳಿಗೆ ವರುಷದ 6 ತಿಂಗಳಲ್ಲಿ ದಿನದ 24 ಗಂಟೆಗಳ ಕಾಲ ನಿರಂತರವಾಗಿ ನೀರು ಮರುಪೂರಣವಾಗುತ್ತಿರುವುದು ಈ ಯಶಸ್ಸಿನ ಹಿಂದಿನ ಗುಟ್ಟಾಗಿದೆ. ನಿರಂತರವಾಗಿ ಭೂಮಿಯ ಒಳಪದರಕ್ಕೆ ನೀರು ಇಂಗುತ್ತಿರುವುದರಿಂದ, ಕೇವಲ ಶೈಲೇಶ್ ಅವರ ಬೋರ್‌ವೆಲ್‌ಗಳಷ್ಟೇ ಅಲ್ಲದೆ ಸುತ್ತಮುತ್ತಲಿನ ಹಲವಾರು ಬೋರ್‌ವೆಲ್‌ಗಳಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಒಣಗಿ ಹೋಗಿದ್ದ ಬೋರ್‌ವೆಲ್‌ಗಳು ಮತ್ತೆ ಜೀವ ಪಡೆದುಕೊಂಡಿದ್ದು, ಜಲಮರುಪೂರಣದ ಶಕ್ತಿ ಎಷ್ಟು ಪ್ರಬಲವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ಪ್ರೇರಣೆಯಾದ ಜಲಮರುಪೂರಣ: ಹಿಂದೆ ಮಾರ್ಚ್ ತಿಂಗಳು ಬರುತ್ತಿದ್ದಂತೆಯೇ ಈ ಭಾಗದ ಹಲವು ಬೋರ್‌ವೆಲ್‌ಗಳು ಸಂಪೂರ್ಣವಾಗಿ ಡ್ರೈ ಆಗುತ್ತಿದ್ದವು. ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಆತಂಕ ಪ್ರತಿ ವರ್ಷ ಕಾಡುತ್ತಿತ್ತು. ಆದರೆ, ಶೈಲೇಶ್ ಅವರ ಈ ನಿರಂತರ ಜಲಮರುಪೂರಣ ಪ್ರಯತ್ನದ ಫಲವಾಗಿ ಕಳೆದ ಎರಡು ವರ್ಷಗಳಿಂದ ಈ ಭಾಗದ ಯಾವುದೇ ಬೋರ್‌ವೆಲ್‌ಗಳಲ್ಲಿ ನೀರಿನ ಕೊರತೆ ಕಂಡುಬಂದಿಲ್ಲ ಎಂಬುದು ಅತ್ಯಂತ ಸಂತಸದ ಸಂಗತಿಯಾಗಿದೆ. ಬೇಸಿಗೆಯಲ್ಲೂ ಉತ್ತಮ ನೀರು ಕಂಡುಬಂದು ನೆಮ್ಮದಿಯ ನಿಟ್ಟುಸಿರು ಬಿಡುವಂತ ವಾತಾವರಣ ನಿರ್ಮಾಣವಾಗಿದೆ. ಭಗೀರಥ ಪ್ರಯತ್ನದ ಮೂಲಕ ಕುವೆಟ್ಟು ಗ್ರಾಮ ಹಾಗೂ ಮೆಲಂತಬೆಟ್ಟು ವ್ಯಾಪ್ತಿಯಲ್ಲಿ ಕುಸಿದಿದ್ದ ಅಂತರ್ಜಲವನ್ನು ಯಾವುದೇ ಖರ್ಚಿಲ್ಲದೆ ಮರುಪೂರಣಗೊಳಿಸಿದ ರೈತ ಶೈಲೇಶ್ ಅವರು ನಿಜವಾದ ಅರ್ಥದಲ್ಲಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ಪ್ರಕೃತಿಯ ಒರತೆಯನ್ನು ಗೌರವಿಸಿ, ವಿಜ್ಞಾನ ಮತ್ತು ತಾಳ್ಮೆಯನ್ನು ಬೆರೆಸಿ ಅವರು ಸಾಧಿಸಿದ ಈ ಯಶಸ್ಸು, ನೀರಿನ ಕೊರತೆಯಿಂದ ಕಂಗೆಟ್ಟಿರುವ ಇತರ ರೈತರಿಗೆ ಹಾಗೂ ಸಮಾಜಕ್ಕೆ ದೊಡ್ಡ ಪ್ರೇರಣೆ ಮತ್ತು ಮಾದರಿಯಾಗಿದೆ.

ಆಧುನಿಕ ಭಗೀರಥ: ಅಂತರ್ಜಲ ಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರವು ನಿರ್ದಿಷ್ಟ ಪ್ರದೇಶಗಳಲ್ಲಿ ಕೆರೆ ತುಂಬಿಸುವುದು ಮತ್ತು ಸಣ್ಣ ನೀರಾವರಿ ಕಾಮಗಾರಿಗಳಿಗೆ 2025-26ರ ಬಜೆಟ್‌ನಲ್ಲಿ ರೂ 553 ಕೋಟಿ ಹಾಗೂ ಸಣ್ಣ ನೀರಾವರಿಗೆ ರೂ.2,000 ಕೋಟಿ ಅನುದಾನ ನೀಡಿದೆ. ಬಳಕೆಯಲ್ಲಿರುವ 28,075 ಜಲಮೂಲಗಳಲ್ಲಿ ಸುಮಾರು ಶೇ. 30ರಷ್ಟು (8,353 ಮೂಲಗಳು) ಮರುಪೂರಣಕ್ಕೆ ಬಳಕೆಯಾಗುತ್ತಿವೆ.ದಕ್ಷಿಣ ಕನ್ನಡ ಜಿಲ್ಲೆಯ ಕ್ರಮ ಮತ್ತು ವೆಚ್ಚದಕ್ಷಿಣ ಕನ್ನಡದಲ್ಲಿ ಸಮಗ್ರ ಜಲಾನಯನ ಅಭಿವೃದ್ಧಿ, ನರೇಗಾ ಅಡಿ ಕಿಂಡಿ ಅಣೆಕಟ್ಟು, ಚೆಕ್ ಡ್ಯಾಮ್ ನಿರ್ಮಾಣ, ನಾಲಾ ಪುನಶ್ಚೇತನ, ಕೃಷಿ ಹೊಂಡ ಮತ್ತು ಕಟ್ಟಡಗಳಿಗೆ ಮಳೆನೀರು ಕೊಯ್ಲು ಕಡ್ಡಾಯಗೊಳಿಸುವ ಕಾರ್ಯಕ್ರಮಗಳಿಗೆ ಕೋಟ್ಯಾಂತ ರೂ ಖರ್ಚು ಮಾಡಲಾಗುತ್ತಿದೆ. ಆದರೆ ಬೆಳ್ತಂಗಡಿ ತಾಲೂಕಿನ ಮೆಲಂತಬೆಟ್ಟು ಗ್ರಾಮ ರೈತ ಕುರ್ತೊಡಿಗುತ್ತು ನಿವಾಸಿ ಕೃಷಿಕ ಶೈಲೇಶ್ ಅವರು ನೈಸರ್ಗಿಕವಾಗಿ ಯಾವುದೇ ಖರ್ಚಿಲ್ಲದೆ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆ ರೂಪಿಸಿ ಈ ಭಾಗದ ಹತ್ತು ಹಲವು ಜಲಮೂಲಗಳಿಗೆ ಮರುಜನ್ಮನೀಡಿದ ಭಗೀರಥನಾಗಿದ್ದಾರೆ.ಸಂಬಂಧ ಪಟ್ಟ ಇಲಾಖೆಗೆ ಇದು ಮಾದರಿಯಾಗಿದೆ. .

Related posts

ಧರ್ಮಸ್ಥಳದಲ್ಲಿ ಎಸ್.ಡಿ.ಎಮ್. ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಸಮಾವೇಶ

Suddi Udaya

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ನಾಟಿ ನೆಡುವ ಪ್ರಾತ್ಯಕ್ಷಿಕೆ

Suddi Udaya

ಆದಿ ಪಜಿರಡ್ಕದಲ್ಲಿ ಜಾತ್ರಾ ಮಹೋತ್ಸವ

Suddi Udaya

ತ್ರೋಬಾಲ್ ಪಂದ್ಯಾವಳಿಯಲ್ಲಿ ಅಂಡೆತಡ್ಕ ಶಾಲೆಯ ಬಾಲಕರ ತಂಡ ದ್ವಿತೀಯ: ಇಬ್ಬರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ: ಬದನಾಜೆ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಗ್ರಾ.ಪಂ. ನಲ್ಲಿ ಜನಜಾತಿಯ ಗರಿಮಾ ಉತ್ಸವ – 2026

Suddi Udaya
error: Content is protected !!