ಬೆಂಗಳೂರಿನಲ್ಲಿ ನಡೆದ ಅಪಹರಣ ಹಾಗೂ ನಿಗೂಢ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರು ಮಂಗಳವಾರ ಚಾರ್ಮಾಡಿ ಘಾಟಿ ಪ್ರದೇಶಕ್ಕೆ ಶವ ಶೋಧಕ್ಕಾಗಿ ಆಗಮಿಸಿದ್ದು ಗುರುವಾರವು ಕಾರ್ಯಾಚರಣೆ ನಡೆದಿದ್ದು ಯಾವುದೇ ರೀತಿಯ ಸುಳಿಹು ಕಂಡುಬಂದಿಲ್ಲ.
ಹಣಕಾಸು ವಿಚಾರದಲ್ಲಿ 9 ತಿಂಗಳ ಹಿಂದೆ ಕೊಲೆ ನಡೆದಿದ್ದು ಚಿಕ್ಕಬಳ್ಳಾಪುರದ ಪ್ರಭಾವಿ ಮುಖಂಡನೋರ್ವನ ಪುತ್ರನ ಸಹಿತ 10 ಮಂದಿ ಸೇರಿ ಎಚ್. ಶರತ್ ಎಂಬಾತನಿಗೆ ಚಿತ್ರಹಿಂಸೆ ನೀಡಿ ಕೊಲೆಗೈದು ಶವವನ್ನು ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಎಸೆದಿರುವುದಾಗಿ ಬಂಧನದ ವೇಳೆ ತಿಳಿಸಿದ್ದರು. ಆರೋಪಿಗಳ ಹೇಳಿಕೆ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಕರೆತಂದು ಕಳೆದ ಮೂರು ದಿನಗಳಿಂದ ಶೋಧ ಕಾರ್ಯ ನಡೆಸಿದ್ದಾರೆ. ಸ್ಥಳೀಯ ಬಣಕಲ್,ಚಾರ್ಮಾಡಿ, ಉಜಿರೆ,ಬೆಳ್ತಂಗಡಿ ಮೊದಲಾದ ಕಡೆಯ ಅನೇಕರು ಶೋಧ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.ಜಟಿಲ ಕಾರ್ಯಾಚರಣೆ.
ಕಣಿವೆ ಪ್ರದೇಶದ ಚಾರ್ಮಾಡಿ ಘಾಟಿಯಲ್ಲಿ ಕಾರ್ಯಾಚರಣೆ ನಡೆಸಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಇಲ್ಲಿನ ಆಳವಾದ ಕಣಿವೆಗಳಿಗೆ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಇಳಿದು ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಒಂದಿಷ್ಟು ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಪರಿಸರದಲ್ಲಿ ಸಾಕಷ್ಟು ಬಿಸಿಲು, ಮೊಬೈಲ್ ನೆಟ್ ವರ್ಕ್ ಸಮಸ್ಯೆ, ಸರಿಯಾದ ನೀರು, ಆಹಾರದ ಲಭ್ಯತೆಯು ಇಲ್ಲದ ಕಾರಣ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ. ಆಳವಾದ ಕಣಿವೆಗಳಲ್ಲಿಇಳಿದು ಹುಡುಕುವುದು ಸುಲಭದ ಕೆಲಸವಲ್ಲ. ಘಾಟಿ ಪರಿಸರದಲ್ಲಿ ಕಾಡಾನೆ ಸಹಿತ ವನ್ಯಜೀವಿಗಳು, ಅಪಾಯಕಾರಿ ಸರೀಸೃಪಗಳು ಸುಳಿದಾಡುತ್ತಿರುತ್ತವೆ.
ದಿಕ್ಕು ತಪ್ಪಿಸುವ ಹೇಳಿಕೆ.
ಆರೋಪಿಗಳು ಘಾಟಿ ಪ್ರದೇಶದ ಮೈಲುಗಲ್ಲಿನ ನಿಗದಿತ ಅಂಕೆಯೊಂದನ್ನು ಹೇಳುತ್ತಿದ್ದು ಈ ಮೈಲುಗಲ್ಲಿನ ಬಳಿಯ ಕಣಿವೆ ಪ್ರದೇಶದಲ್ಲಿ ಶವ ಎಸೆದಿರುವುದಾಗಿ ಹೇಳುತ್ತಿದ್ದಾರೆ. ಆದರೆ ಆ ಅಂಕಿಯ ಹತ್ತಾರು ಮೈಲುಗಲ್ಲುಗಳಿದ್ದು,ಅಲ್ಲೆಲ್ಲಾ ಹುಡುಕಾಟ ನಡೆಸಿದರು ಶವ ಪತ್ತೆಯಾಗಿಲ್ಲ.
ಪ್ರಕರಣ ನಡೆದು 9 ತಿಂಗಳು ಕಳೆದಿರುವುದರಿಂದ ಶವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಅಥವಾ ವನ್ಯಪ್ರಾಣಿಗಳ ಪಾಲಾಗಿರುವ ಸಾಧ್ಯತೆಯು ಇಲ್ಲದಿಲ್ಲ. ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಯೇ ಎಂಬ ವಿಚಾರವು ಚರ್ಚೆಗೊಳಗಾಗಿದೆ.
ಕಾರ್ಯಾಚರಣೆ ಸ್ಥಗಿತ
ಜ.6ರಂದು ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಲಿರುವ ಕಾರಣ ಪೊಲೀಸರು ಬೆಂಗಳೂರಿಗೆ ಹಿಂದಿರುಗಿದ್ದು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಕೋರ್ಟಿನ ಆದೇಶದ ಮೇರೆಗೆ ಮುಂದಿನ ಕಾರ್ಯಾಚರಣೆಯ ವಿಚಾರ ತಿಳಿದು ಬರಬೇಕಿದೆ.ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಚೈತನ್ಯ,ಮಹಿಳಾ ಸಬ್ ಇನ್ಸ್ ಪೆಕ್ಟರ್ ಅಶ್ವಿನಿ, ಸಿ.ಸಿ.ಬಿ.ನಂದೀಶ್, ಮೊದಲಾದವರು ಸೇರಿ 10ಮಂದಿ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.