ಪುಂಜಾಲಕಟ್ಟೆ ಜ.19: ಶಾಲಾ ಶಿಕ್ಷಣ ಮತ್ತು ಸಾಕ್ಷರತಾಇಲಾಖೆ, ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ವತಿಯಿಂದ ಮಡಂತ್ಯಾರು, ಮಾಲಾಡಿ, ಮಚ್ಚಿನ ಗ್ರಾಮ ಪಂಚಾಯತ್‌ಗಳು, ಜೇಸಿಐ ಮಡಂತ್ಯಾರು, ರೋಟರಿ ಕ್ಲಬ್ ಮಡಂತ್ಯಾರು ಹಾಗೂ ವರ್ತಕರ ಸಂಘ ಮಡಂತ್ಯಾರು-ಪುಂಜಾಲಕಟ್ಟೆ ಇವರು ಸಹಕಾರದಲ್ಲಿ ಪುಂಜಾಲಕಟ್ಟೆ ಕೆಪಿಎಸ್ ಶಾಲಾ ವಠಾರದಲ್ಲಿ ಎರಡು ದಿನಗಳ ಕಾಲ ನಡೆಯುವ ಪುಂಜಾಲಕಟ್ಟೆ ಕ್ಲಸ್ಟರ್ ವ್ಯಾಪ್ತಿಯ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮಾಲಾಡಿ ಗ್ರಾ.ಪಂ. ಅಧ್ಯಕ್ಷೆ ಬೇಬಿ ಸೂಸಾನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಂಜಾಲಕಟ್ಟೆ ಶಾಲೆಯಲ್ಲಿ ಗುಣಮಟ್ಟದ ಉತ್ತಮ ಶಿಕ್ಷಣ ದೊರಕುತ್ತಿದ್ದು, ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ಜ್ಞಾನ ದೊರಕುವಂತಾಗಲಿ ಎಂದರು. ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ, ಬೌಗೋಳಿಕವಾಗಿ, ಕ್ರಿಯಾತ್ಮಕವಾಗಿ ಅರಿತುಕೊಂಡು ಕೌಶಲ ವೃದ್ಧಿಗೆ ಪೂರಕವಾಗಿದ್ದು, ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ದೈಹಿಕ, ಮಾನಸಿಕವಾಗಿ ಸದೃಢರಾಗಲು ಪೌಷ್ಠಿಕ ಹಾರದ ಅಗತ್ಯವಿದೆ ಎಂದರು. ಮಾಲಾಡಿ ಗ್ರಾ.ಪಂ. ಉಪಾಧ್ಯಕ್ಷ ದಿನೇಶ್ ಕರ್ಕೆರ, ಪಂ.ಅ.ಅಧಿಕಾರಿ ಕೆ.ರಾಜಶೇಖರ ರೈ, ಮಡಂತ್ಯಾರು ಜೆಸಿಐ ಅಧ್ಯಕ್ಷ ಅಶೋಕ್ ಭಂಡಾರಿ, ಮಡಂತ್ಯಾರು ಗ್ರಾ.ಪಂ.ಸದಸ್ಯರಾದ ಹನೀಫ್, ಪಾರ್ವತಿ, ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ, ಶೋಭಾ, ಸಿಆರ್‌ಪಿ ಚೇತನಾ, ಕೆಪಿಎಸ್ ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕ ಸುರೇಶ್ ಶೆಟ್ಟಿ, ವೇದಿಕೆಯಲ್ಲಿದ್ದರು. ವಿವಿಧ ಶಾಲಾ ಮುಖ್ಯ ಶಿಕ್ಷಕರಾದ ಲತಾ, ಸಬಿನಾ, ರಘುಪತಿ ಕೆ. ರಾವ್, ಸಂಪನ್ಮೂಲ ವ್ಯಕ್ತಿಗಳಾದ ಅನಿತಾ ರೇಶ್ಮಾ ಡಿಸೋಜ, ಲವಿಟಾ ಪಿಂಟೊ, ಪ್ರಶಾಂತ್ ಕಾಮತ್, ಪ್ರೌಢಶಾಲಾ ಶಿಕ್ಷಕರಾದ ನಿರಂಜನ್ ಜೈನ್, ಹರಿಪ್ರಸಾದ್, ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಉದಯ ಕುಮಾರ್ ಬಿ.ಜೈನ್ ಸ್ವಾಗತಿಸಿ, ಪ್ರಸ್ತಾವಿಸಿದರು.ಶಿಕ್ಷಕ ರಮೇಶ್ ಬಂಕೊಳ್ಳಿ ವಂದಿಸಿದರು. ಕಲಿಕಾ ಹಬ್ಬದ ನಿರ್ವಾಹಕ, ಶಿಕ್ಷಕ ಧರಣೇಂದ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಪುಂಜಾಲಕಟ್ಟೆ ಕ್ಲಸ್ಟರ್ ವ್ಯಾಪ್ತಿಯ ೧೧ ಶಾಲೆಗಳ ೧೨೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.