April 2, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ

ಬೆಳ್ತಂಗಡಿ: ಶುದ್ಧ ಮನಸ್ಸಿನಿಂದ ದೇವರಿಗೆ ಶರಣಾದರೆ ಮಾನಸಿಕ ನೆಮ್ಮದಿಯ ಜತೆಗೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಆಡಂಬರದ ಆರಾಧನೆಗಿಂತ ಭಕ್ತಿಯ ಆರಾಧನೆ ದೇವರಿಗೆ ಪ್ರಿಯವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾರಾವಿ ವಿಭಾಗದ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಶ್ರೀ ಉಮಾಮಹೇಶ್ವರ ದೇವಸ್ಥಾನ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸಹಕಾರದೊಂದಿಗೆ ಮಂಗಳವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಜನರಲ್ಲಿ ಧಾರ್ಮಿಕಪ್ರಜ್ಞೆ ಜಾಗೃತಗೊಂಡಿದೆ. ಊರಿನ ಶ್ರದ್ಧಾಕೇಂದ್ರಗಳು ಬೆಳಗಿದಾಗ ಗ್ರಾಮ ಸುಬೀಕ್ಷೆಯಾಗುತ್ತದೆ ಎಂದರು.

ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸಿ, 2024ರಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ಆರಂಭವಾಗಲಿದೆ. ಭಕ್ತರ ಸಹಕಾರದಲ್ಲಿ ಸುಸಜ್ಜಿತ ಸಭಾಭವನ, ಸುರಕ್ಷತಾ ಕೊಠಡಿ, ಮುಖಮಂಟಪ ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ. ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದರು.

ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್ ಮಾತನಾಡಿ, ಶ್ರದ್ಧಾಕೇಂದ್ರಗಳು ಗ್ರಾಮದ ಅಭಿವೃದ್ಧಿಯ ಸಂಕೇತ. ಶಾಸಕ ಹರೀಶ್ ಪೂಂಜ ಅವರ ವಿಶೇಷ ಪ್ರಯತ್ನದಿಂದ ದೇವಸ್ಥಾನದ ಅಭಿವೃದ್ಧಿಗೆ ₹35 ಲಕ್ಷ ಅನುದಾನ ಮಂಜೂರಾಗಿದೆ ಎಂದರು.

ಮರೋಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮಶ್ರೀ ಜೈನ್, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮುಂಬೈ ಘಟಕದ ಅಧ್ಯಕ್ಷ ನಾರಾಯಣ ಸುವರ್ಣ ಕನರೊಟ್ಟು, ದೇವಸ್ಥಾನದ ಮೊಕ್ತೇಸರ ವಿಜಯ ಆರಿಗ, ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷರಾದ ಸಂತೋಷಪೂಜಾರಿ, ಶುಭರಾಜ ಹೆಗ್ಡೆ, ಯೋಜನೆಯ ಸೇವಾ ಪ್ರತಿನಿಧಿಗಳಾದ ಹರಿಣಾಕ್ಷಿ, ಶಶಿಕಲಾ ಇದ್ದರು.

ಯೋಜನೆಯ ನಾರಾವಿ ವಲಯದ ಮೇಲ್ವಿಚಾರಕಿ ದಮಯಂತಿ ಸ್ವಾಗತಿಸಿದರು. ಪೂಜಾ ಸಮಿತಿ ಅಧ್ಯಕ್ಷ ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ: ದಾನಿಗಳಾದ ಎಂ.ಕೆ. ಆರಿಗ ಗಾಳಿವನ, ಚಿಕ್ಕಮೇಳದ ಜವಾಬ್ದಾರಿ ವಹಿಸಿದ್ದ ಸುರೇಶ್ ಜೈನ್ ಕೊಕ್ರಾಡಿ, ರಮೇಶ್ ಹೆಗ್ಡೆ ಶಾಶ್ವತ ನಿಲಯ, ಸ್ವಯಂ ಸೇವಕರಾದ ಸೋಮನಾಥ ಪೂಜಾರಿ ಹಿಮರಡ್ಡ, ವಸಂತ ಕುಮಾರ್ ಅಮ್ಮ ನಿವಾಸ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಶ್ರೀಧರ ಕುಲಾಲ್ ಮರೋಡಿ ಅವರನ್ನು ಸನ್ಮಾನಿಸಲಾಯಿತು.

‘ಕುಮಾರ ಪಾತ್ರಿಗಳಿಗೆ ವೀಳ್ಯ’

ಮರೋಡಿ ದೇವಸ್ಥಾನಕ್ಕೆ ಬರುತ್ತಿದ್ದ ಕುಮಾರ ಪಾತ್ರಿ ಕೃಷ್ಣಪ್ಪ ಮಡಿವಾಳ ಕಳೆದ ವರ್ಷ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ದರಗುಡ್ಡೆ ನಾಗರಾಜ ಭಟ್ ಮಾರ್ಗದರ್ಶನದಲ್ಲಿ ನಡೆದ ಪ್ರಶ್ನಾಚಿಂತನೆ ಪ್ರಕಾರ ದೇವಸ್ಥಾನಕ್ಕೆ ಪೂರ್ಣಕಾಲಿಕ ಕುಮಾರ ಪಾತ್ರಿಗಳಾಗಿ ರಾಜೇಶ್ ಪೂಜಾರಿ ಸಾವ್ಯ ಮತ್ತು ಸಂತೋಷ್ ಇರುವೈಲು ಅವರಿಗೆ ವೀಳ್ಯ ನೀಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹೇಳಿದರು.

ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಗೆ ಚಾಲನೆ

ಮರೋಡಿ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಾನದಲ್ಲಿ ಸಂಪ್ರದಾಯವಾಗಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಯು ಭಾನುವಾರ ಆರಂಭವಾಗಿದ್ದು, ಗುರುವಾರ ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸೋಮವಾರ ತೋರಣ ಮುಹೂರ್ತ, ಧ್ವಜಾರೋಹಣ, ಅನ್ನಸಂತರ್ಪಣೆ, ಸಂಜೆ ದೊಡ್ಡ ರಂಗಪೂಜೆ, ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ, ಮೈಸಂದಾಯ ದೈವಗಳಿಗೆ ಗಗ್ಗರ ಸೇವೆ, ಕುಣಿತ ಭಜನೆ ನಡೆಯಿತು. ನಂತರ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಬೆದ್ರ ಪಿಂಗಾರ ಕಲಾವಿದರಿಂದ ಭರಣಿ ಕೃತಿಕೆ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

Related posts

ವಿವೇಕರಥ- ಯುವ ಪಥ ಯುವ ಜಾಗೃತಿ ಜಾಥಾ’ ರಥಯಾತ್ರೆಗೆ‌ ಬೆಳ್ತಂಗಡಿ ತಾಲೂಕಿಗೆ ಸ್ವಾಗತ

Suddi Udaya

ಪುದುವೆಟ್ಟು ಶ್ರೀ.ಧ.ಮಂ ಅ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ  ಮತ್ತು ನೃತ್ಯ ತರಗತಿಗಳ ಉದ್ಘಾಟನೆ

Suddi Udaya

ಅರಸಿನಮಕ್ಕಿ : ಸೈನಿಕ ಕೆ. ಮಹಾಬಲ ಮುದ್ದಿಗೆಯವರಿಗೆ ನಾಗರಿಕರಿಂದ ಅಭಿನಂದನೆ

Suddi Udaya

ಅಥ್ಲೆಟಿಕ್ ಕ್ರೀಡಾಕೂಟ: ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಿದ್ಯಾರ್ಥಿನಿ ಚಂದ್ರಿಕಾರಿಗೆ ಬೆಳ್ಳಿ ಪದಕ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಕ್ರಮ

Suddi Udaya

ಬೆಳಾಲು: ಕೊಲ್ಪಾಡಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ: ಇವಿಎಂ ಮಾದರಿ ಆ್ಯಪ್ ಬಳಸಿ ಮತ ಚಲಾವಣೆ

Suddi Udaya
error: Content is protected !!