ಕೊಯ್ಯೂರು:ದ.ಕ. ಜಿಲ್ಲಾ ಮಟ್ಟದ ಮಲೆಕುಡಿಯರ ಸಮಾವೇಶ
ಮಲೆಕುಡಿಯರು ಸಮುದಾಯ ಸಂಘಟನೆಯನ್ನು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಬೆಳೆಸಿಕೊಂಡು ಬಂದಿದ್ದು, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಂಘದ ಮೂಲಕ ಶ್ರಮಿಸಲಾಗುತ್ತಿದೆ. ಶಿಕ್ಷಣ ಹಾಗೂ ಅವಕಾಶ, ಸೌಲಭ್ಯಗಳ ಕಲ್ಪಿಸುವಿಕೆಯ ಮೂಲಕ ಸಮುದಾಯವು ಮತ್ತಷ್ಟು ಪ್ರಗತಿ ಹೊಂದಲು ಸಾಧ್ಯ ಎಂದು ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ್ ಈದು ಹೇಳಿದರು.
ಬೆಳ್ತಂಗಡಿಯ ಕೊಯ್ಯೂರು-ಶಿವಗಿರಿಯಲ್ಲಿರುವ ಮಲೆಕುಡಿಯರ ಸಭಾಭವನದಲ್ಲಿ ಮಾ.4ರಂದು ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿಯ ವಾರ್ಷಿಕ ಸಮಾವೇಶದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಲೆಕುಡಿಯ ಸಮುದಾಯದ ಕಾರ್ಯಕ್ರಮಗಳಿಗಾಗಿ ಜಿಲ್ಲಾ ಮಟ್ಟದ ಸಮುದಾಯ ಭವನದ ಅಗತ್ಯವಿದೆ. ಈಗಾಗಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಸಮುದಾಯ ಭವನಕ್ಕೆ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಬೆಳ್ತಂಗಡಿಯಲ್ಲಿ ಮಲೆಕುಡಿಯರ ಜಿಲ್ಲಾ ಮಟ್ಟದ ಸಮುದಾಯದ ನಿರ್ಮಾಣಗೊಳ್ಳಲಿ ಮತ್ತು ಸಮುದಾಯದ ಸಮಸ್ಯೆಗಳು ಪರಿಹಾರವಾಗಲಿ ಎಂದು ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ. ಪೊಳಲಿ ಪ್ರಸ್ತಾವಿಕ ಭಾಷಣದಲ್ಲಿ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಎಳನೀರು ಮಾತನಾಡಿ ಸಮುದಾಯದ ನೈಜ ಸಮಸ್ಯೆಗಳಿಗೆ ಧ್ವನಿಯಾಗಲು ಸಂಘಟನೆ ಬದ್ಧವಾಗಿದ್ದು, ಯಾರೇ ಆಗಲಿ ಸಮಾಜದಲ್ಲಿ ಮಲೆಕುಡಿಯರ ಬಗ್ಗೆ ಹೇಳಿಕೆಗಳನ್ನು ನೀಡುವಾಗ ಎಚ್ಚರ ವಹಿಸಬೇಕು. ಸಮುದಾಯದವನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿಪಶು ಮಾಡಿಕೊಳ್ಳುವವರು ಸಾಕಷ್ಟು ಮಂದಿಯಿದ್ದು ಈ ಬಗ್ಗೆ ಜಾಗರೂಕರಾಗಿರಬೇಕು ಎಂದರು.
ಇತ್ತೀಚೆಗೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರೊಬ್ಬರು ಸಮಸಂಜಸ ಹೇಳಿಕೆ ನೀಡಿದ್ದಾರೆ. ವೃಥಾ ಆರೋಪ ಮಾಡುವುದು ಸರಿಯಲ್ಲ. ಮಲೆಕುಡಿಯರು ಕೋಮುವಾದಿಗಳಲ್ಲ. ಮುಗ್ಧತೆ, ಪ್ರಾಮಾಣಿಕತೆ, ತ್ಯಾಗ-ಬದ್ಧತೆಯ ಜೊತೆಗೆ ಜಾಗೃತರಾಗಿದ್ದಾರೆ. ಮಂಗಳೂರು, ಬೆಂಗಳೂರಿನಲ್ಲಿ ಕುಳಿತು ಮಲೆಕುಡಿಯರ ಸಮುದಾಯದ ಬಗ್ಗೆ ಹೇಳಿಕೆ ನೀಡಿದರೆ ತೀವ್ರ ಪರಿಣಾಮ ಎದುರಿಸಬೇಕಾದಿತು.
– ಶ್ರೀಧರ್ ಈದು, ರಾಜ್ಯಾಧ್ಯಕ್ಷರು ಮಲೆಕುಡಿಯರ ಸಂಘ.
ಬೆಳಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮನೋರಂಜನಾ ಆಟಗಳು, ಸಂಜೆ ಭಜನೆ, ಸಭಾ ಕಾರ್ಯಕ್ರಮ ಮತ್ತು ಸಮುದಾಯ ಬಾಂಧವರಿಂದ ಪ್ರತಿಭಾ ಪ್ರದರ್ಶನ ಹಾಗೂ ಎಂ.ಜಿ. ಟೈಲರ್ ಕಥೆ, ನಿದೇರ್ಶನದದ ಮಲೆಕುಡಿಯ ಬಾಂಧವರು ಅಭಿನಯಿಸಿದ ’ಲತ್ತ್‌ನೆತ್ತರ್’ ತುಳು ಸಾಂಸಾರಿಕ ನಾಟಕ ಪ್ರಸ್ತುತಗೊಂಡಿತು.
ಸಭಾಕಾರ್ಯಕ್ರಮವನ್ನು ಶ್ರಾವ್ಯ ಮತ್ತು ಅಶ್ವಿನಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ರೇಷ್ಮಾ ಬೆಳಾಲು ಮತ್ತು ಚೈತ್ರಾ ನಿರೂಪಿಸಿದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ ಸ್ವಾಗತಿಸಿ, ಉಪಾಧ್ಯಕ್ಷ ಮಾಧವ ಸುಬ್ರಹ್ಮಣ್ಯ ಧನ್ಯವಾದ ಸಲ್ಲಿಸಿದರು.
ರಾಜ್ಯ ಮಲೆಕುಡಿಯ ಸಂಘದ ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರ್, ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ್ ಈದು, ಕೊಯ್ಯೂರು ಗ್ರಾ. ಪಂ. ಅಧ್ಯಕ್ಷ ಜಗನ್ನಾಥ್, ಪುತ್ತೂರು ತಾ. ಸಮಿತಿ ಅಧ್ಯಕ್ಷ ಜಯಪ್ರಕಾಶ್, ಬೆಳ್ತಂಗಡಿ ತಾ. ಸಮಿತಿ ಅಧ್ಯಕ್ಷ ಶಿವರಾಮ್ ಉಜಿರೆ, ಪುಟ್ಟಣ್ಣ ನೆಲ್ಲಿಕಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಗೌರವ ಸನ್ಮಾನ
ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಗಗನ್ ಬೆಂಗಳೂರು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಮಲಾ ಬೆಳಾಲು ಹಾಗೂ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಸಮುದಾಯದಲ್ಲಿದ್ದ ನಿವೃತ್ತ ಸರಕಾರಿ ನೌಕರರನ್ನು ಗೌರವಿಸಲಾಯಿತು.
ಕವನ ಸಂಕಲನ ಬಿಡುಗಡೆ
ಕೊಕ್ಕಡ ಕಲ್ಲಡ್ಕದ ಚೆನ್ನಪ್ಪ ಮಲೆಕುಡಿಯ ಬರೆದು ತುಳು ಮತ್ತು ಕನ್ನಡ ಕವಿತೆಗಳನ್ನು ಒಳಗೊಂಡ ’ಮಲೆತ ಪುರ್ಪ- ಮಲೆತ ಬಾಲೆದ ಉಡಲ ಅಂಗಲಾಪು’ ಎಂಬ ಕವನ ಸಂಕಲನವನ್ನು ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಈದು ಲೋಕಾರ್ಪಣೆಗೊಳಿಸಿದರು. ಭಾಸ್ಕರ ಕೆ. ಕುಂಟಪದವು ಮುನ್ನಡಿ ಮತ್ತು ಜಯೇಂದ್ರ ಎಂ. ನಿಡ್ಲೆ ಬೆನ್ನುಡಿ ಬರೆದಿದ್ದಾರೆ. ಖ್ಯಾತ ಚಿತ್ರಕಲಾವಿದೆ ಜಯಶ್ರೀ ಬಿ.ಮಂಗಳೂರು ಸಂಕಲನದ ಮುಖಪುಟ ಚಿತ್ರವನ್ನು ರಚಿಸಿದ್ದಾರೆ.