ಉಜಿರೆ: ಗ್ರಾಮ ಪಂಚಾಯಿತಿ ಉಜಿರೆ,ಪ್ರೇರಣಾ ಸಂಜೀವಿನಿ ಒಕ್ಕೂಟ ಉಜಿರೆ, ಇವುಗಳ ಸಹಕಾರದೊಂದಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಘಟಕ ಇದರ ಮಹಿಳಾ ಪ್ರಕಾರದ ವತಿಯಿಂದ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉಜಿರೆಯ ಶಾರದಾ ಮಂಟಪದಲ್ಲಿ ಜರುಗಿತು.
ಗ್ರಾಮೀಣ ಮಹಿಳೆಯರಲ್ಲಿ ಸಾಹಿತ್ಯಕ ಮೌಲ್ಯಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಬೆಳ್ತಂಗಡಿಯ ವಾಣಿ ವಿದ್ಯಾಲಯದ ಕನ್ನಡ ಉಪನ್ಯಾಸಕ ಮಹಾಬಲ ಗೌಡ “ವಿದ್ಯೆ ಇಲ್ಲದಿದ್ದ ಕಾಲದಿಂದಲೂ ಮಹಿಳೆ ತನ್ನ ಆಂತರಿಕ ಭಾವನೆಗಳ ಹೊರಹೊಮ್ಮುವಿಕೆಗೆ ಸಾಹಿತ್ಯವನ್ನು ಒಂದು ಮಾರ್ಗವಾಗಿ ಕಂಡುಕೊಂಡಿದ್ದಾಳೆ. ಇಂದಿನ ಆಧುನಿಕ ಯುಗದಲ್ಲಿಯೂ ಪ್ರಲೋಭನೆಗಳಿಗೆ ಒಳಗಾಗದೆ ಉತ್ತಮ ಸಾಹಿತ್ಯದತ್ತ ಗಮನವಹಿಸಿ ಮುಂದಿನ ಪೀಳಿಗೆಗೆ ಆಕೆ ವರದಾನವಾಗಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದರು. ಉಜಿರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ “ಮಹಿಳೆ ಈ ಮಣ್ಣಿನ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕವಾಗಿ ಸ್ಪಂದಿಸುವ ಮನಸ್ಥಿತಿಯನ್ನು ಹೊಂದಿಕೊಂಡಾಗ ಮಾತ್ರ ಅಂತಹ ಮನೆ ಮತ್ತು ಸಮಾಜ ಸಮೃದ್ಧಿಯತ್ತ ಸಾಗಲು ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಪ್ರಕಾರದ ತಾಲೂಕು ಪ್ರಮುಖ ವಿದ್ಯಾಶ್ರೀ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಪ್ರೇರಣಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶೀಲಾ ಮಹಾಬಲ ಗೌಡ,ಅಭಾಸಾಪ ಜಿಲ್ಲಾ ಸಂಯೋಜಕ ಸುಂದರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷ ಚಟುವಟಿಕೆಯಾಗಿ ಸೇರಿದ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಗಾಗಿ ಆಶು ಕವಿತೆ ರಚಿಸುವ ಸ್ಪರ್ಧೆ ಏರ್ಪಡಿಸಲಾಯಿತು. ಅದರಲ್ಲಿ ಮೂರು ಕವಿತೆಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬೆಳ್ತಂಗಡಿ ಮಹಿಳಾ ಪ್ರಕಾರದ ಸದಸ್ಯೆಯರಿಂದ ರಚಿತವಾದಂತಹ ಪುಸ್ತಕಗಳನ್ನು ಗ್ರಾಮ ಪಂಚಾಯಿತಿಯ ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು.
ಮಹಿಳಾ ಪ್ರಕಾರದ ಸದಸ್ಯೆ ವಿನುತಾ ರಜತ್ ಗೌಡ ಕಾರ್ಯಕ್ರಮ ನಿರೂಪಿಸಿದರು.ಆಶಾ ಅಡೂರು ಸ್ವಾಗತಿಸಿದರು. ವನಜಾ ಜೋಶಿ ವಂದಿಸಿದರು.