ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರಿಗೆ ಸರಕಾರದಿಂದ ದೊರೆಯುವ ಜಾಗ ಸೌಲಭ್ಯಕ್ಕಾಗಿ ಕಳೆದ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ಸರಕಾರದಿಂದ ಮಂಜೂರಾತಿ ಆದೇಶವಾದರೂ, ಗಣ್ಯವ್ಯಕ್ತಿಗಳ ಪ್ರಭಾವದಿಂದಾಗಿ ಸರಕಾರದ ಕೆಳ ಮಟ್ಟದ ಅಧಿಕಾರಿಗಳು ಇದನ್ನು ಅನುಷ್ಠಾನ ಮಾಡುತ್ತಿಲ್ಲ, ನನಗೆ ಇನ್ನೂ ನನಗೆ ನ್ಯಾಯ ಸಿಕ್ಕಿಲ್ಲ ಎಂದು ಭಾರತೀಯ ಭೂಸೇನೆಯ ನಿವೃತ್ತ ಯೋಧ ಚಂದಪ್ಪ ಗೌಡ ಆರೋಪಿಸಿದರು.
ಅವರು ಮಾ.೨೩ ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಭಾರತೀಯ ಭೂ ಸೇನೆಯಲ್ಲಿ ಇರುವ ಸಂದರ್ಭದಲ್ಲಿ ಶತ್ರುಗಳ ಗುಂಡು ತಗಲಿ ವಿಕಲ ಚೇತನರಾದ ಬಳಿಕ 2003ರಲ್ಲಿ ನಿವೃತ್ತನಾಗಿದ್ದೇನೆ. ನಿವೃತ್ತರಿಗೆ ಸರಕಾರದಿಂದ ದೊರೆಯುವ ಜಾಗಕ್ಕೆ ಕಾಣಿಯೂರು ಗ್ರಾಮದ 113 ಸರ್ವೆನಂಬ್ರದಲ್ಲಿ ನಿವೃತ್ತ ಸೈನಿಕರಿಗೆ ಮೀಸಲಿಟ್ಟ 13.80 ಎಕ್ರೆ ಸರಕಾರಿ ಜಾಗಕ್ಕೆ ಅರ್ಜಿ ಸಲ್ಲಿಸಿದ್ದು, ಸರಕಾರದ ನಿಯಮ ಅನುಸಾರ ನನಗೆ 7.50 ಎಕ್ರೆ ಜಾಗ ಮಂಜೂರು ಆಗಿತ್ತು. ಆದರೆ ಅಲ್ಲಿಯ ಕೊಲ್ಲಾಜೆ ನಾರಾಯಣ ರಾವ್ ಅವರು ಇದು ತಮ್ಮ ಕುಮ್ಮಿ ಜಾಗ ವೆಂದು ಆಕ್ಷೇಪ ಸಲ್ಲಿಸಿ 2004 ರಲ್ಲಿ ನ್ಯಾಯಾಲಯದಲ್ಲಿ ಕೆಇಟಿ ಹಾಕಿದ್ದು, ಅದು ವಜಾಗೊಂಡಿತ್ತು. ನಂತರ 2007 ರಲ್ಲಿ ಹೈಕೋರ್ಟ್ ನಲ್ಲಿ ರೀಟ್ ಪಿಟಿಶನ್ ಹಾಕಿದ್ದು ಅದು ಡಿಸ್‌ಮಿಸ್ ಆಗಿದೆ. ಸರಕಾರದಿಂದ ಆನೇಕ ಬಾರಿ ಆದೇಶವಾದರೂ ನನ್ನ ಹೆಸರಿಗೆ ಜಾಗ ಮಂಜೂರಾತಿಗೆ ಕೊಲ್ಲಾಜೆಯ ಈಗ ಪಕ್ಷೇತರ ರಾಗಿ ಚುನಾವಣೆಗೆ ನಿಂತಿರುವ ಆದಿತ್ಯ ರಾವ್ ಸೇರಿ ಗಣ್ಯರ ಪ್ರಭಾವದಿಂದ ಸ್ಥಳೀಯ ಗ್ರಾಮಕರಣಿಕರು, ಕಂದಾಯ ಅಧಿಕಾರಿಗಳು ಸರಕಾರದ ಆದೇಶವನ್ನು ಅನುಷ್ಠಾನ ಮಾಡುತ್ತಿಲ್ಲ ಕಳೆದ 20 ವರ್ಷಗಳಿಂದ ಈ ಜಾಗಕ್ಕಾಗಿ, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಅಧಿಕಾರಿಗಳು ಸೂಕ್ತ ತನಿಖೆ ಮಾಡಿ ನಿವೃತ್ತ ಸೈನಿಕನಿಗೆ ಜಾಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.