ಬೆಳ್ತಂಗಡಿ: ರಾಜ್ಯ ವಿಧಾನಸಭಾ ಚುನಾವಣೆಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇಂದು ಮಾ. 29ರಂದು ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಚುನಾವಣಾ ವೇಳಾಪಟ್ಟಿ ಘೋಷಣೆ ಮಾಡಿದ್ದಾರೆ.
ಮೇ 10ರಂದು ಬೆಳ್ತಂಗಡಿ ಸೇರಿದಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 29ರಿಂದಲೇ ರಾಜ್ಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. . ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಎ.13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಅಂದೇ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಎ. 20 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಎ.21ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಎ. 24ರಂದು ನಾಮಪತ್ರ ಹಿಂಪಡೆಯುವಿಕೆಗೆ ಕೊನೆಯ ದಿನಾಂಕವಾಗಿದೆ.
80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ:
80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ಹಾಗೂ ಎ.1 ಕ್ಕೆ 18 ವರ್ಷ ತುಂಬಿದವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನೀತಿ ಸಂಹಿತೆ ಜಾರಿ:
ಚುನಾವಣಾ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿರುವ ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿಗೊಳಿಸಿದೆ. ಜನಪ್ರತಿನಿಧಿಗಳು ಬಳಸುತ್ತಿರುವ ಸರಕಾರಿ ವಾಹನಗಳನ್ನು ವಾಪಸ್ ಪಡೆದು ಕೊಳ್ಳಲಾಗಿದ್ದು , ಶಾಸಕರ, ಸಂಸದರ ಸಹಿತ ಜನಪ್ರತಿನಿಧಿಗಳ ಭಾವಚಿತ್ರ ಅಥವಾ ಪಕ್ಷದ ಚಿಹ್ನೆ ಇರುವ ಬ್ಯಾನರ್, ಫಲಕಗಳನ್ನು ತೆರವುಗೊಳಿಸಲಾಗುತ್ತಿದೆ. ಪತ್ರಿಕೆ, ಟಿ.ವಿ, ವೆಬ್‌ಸೈಟ್‌ಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ.
ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಯಾವುದೇ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸುವಂತಿಲ್ಲ. ಯಾವುದೇ ಹೊಸ ಯೋಜನೆಗಳನ್ನು ಘೋಷಿಸುವಂತೆಯೂ ಇಲ್ಲ ಭರವಸೆ ನೀಡುವಂತೆಯೂ ಇಲ್ಲ ಎಂದು ನೀತಿ ಸಂಹಿತೆಯಲ್ಲಿ ಇದೆ.