ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕರ್ನಲ್ ನಿತಿನ್ ಆರ್. ಭಿಡೆಯವರಿಗೆ ಅಭಿನಂದನಾ ಸಮಾರಂಭ ಮಾ.31ರಂದು ಸಂಜೆ ಕುತ್ಯಾರು ದೇವಸ್ಥಾನದ ವಠಾರದಲ್ಲಿ ಜರುಗಿತು.
ಮಾಜಿ ಸೈನಿಕರ ಸಂಘ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ, ಕರಾಡ್ಹ ಬ್ರಾಹ್ಮಣ ಸಮಾಜ ಬೆಳ್ತಂಗಡಿ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ, ಚಿತ್ಪಾವನ ಬ್ರಾಹ್ಮಣರ ಬಳಗ ಉಜಿರೆ, ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಸಭಾ, ಕೂಟ ಜಗತತು ಸಾಲಿಗ್ರಾಮ ಅಂಗ ಸಂಸ್ಥೆ ಬೆಳ್ತಂಗಡಿ, ಚಿತ್ಪಾವನ ಸಂಘಟನೆ ಮುಂಡಾಜೆ, ತುಳು ಶಿವಳ್ಳಿ ಸಭಾ ಉಜಿರೆ, ಉಪ್ಪಿನಂಗಡಿ ಹವ್ಯಕ
ಮಂಡಲ ಉಜಿರ ವಲಯ, ಭಿಡೆ ಕುಟುಂಬಸ್ಥರು, ವರ್ತಕರು ಬೆಳ್ತಂಗಡಿ ಇವರು ನಿವೃತ್ತ ಕರ್ನಲ್ ನಿತಿನ್ ಆರ್. ಭಿಡೆಯವರನ್ನು ಹೂ ಹಾರ ಹಾಕಿ ಗೌರವಿಸಿದರು. ನಿತಿನ್ ಆರ್. ಭಿಡೆಯವರು ತನ್ನ ಸೇವಾ ಅವಧಿಯ ಅನುಭವಗಳ ಬಗ್ಗೆ ಮಾತನಾಡಿ, ಸೈನಿಕರಿಗೆ ದೇಶದ ರಕ್ಷಣೆಯೇ ಮುಖ್ಯ ಧ್ಯೇಯವಾಗಿದ್ದು, ಭಾರತ ಮಾತೆಯ ಸೇವೆ ಜೀವನದಲ್ಲಿ ದೊರೆತ ಪುಣ್ಯ ಕಾರ್ಯವಾಗಿದೆ ಎಂದು ಹೇಳಿ, ಅಭಿನಂದಿಸಿದ ಎಲ್ಲಾ ಸಂಘ – ಸಂಸ್ಥೆಯವರಿಗೆ ಕೃತಜ್ಞತೆ ಸಲ್ಲಿಸಿದರು. ಬಾಲಕೃಷ್ಣ ಸಹಸ್ರಬುದ್ಯೆ ದೇಶ ಭಕ್ತಿ
ಹಾಡಿದರು. ಬೆಳ್ತಂಗಡಿ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸುನೀಲ್ ಶೆಣೈ ಸ್ವಾಗತಿಸಿದರು. ನಾವೂರು ಆರೋಗ್ಯ ಕ್ಲಿನಿಕ್ ಡಾ. ಪ್ರದೀಪ್ ಕಾರ್ಯಕ್ರಮ ನಿರೂಪಿಸಿ, ಯೋಗೀಶ್ ಭಿಡೆ ವಂದಿಸಿದರು. ಮೇ|ಜ| ಎಂ.ವಿ ಭಟ್ ಸೇರಿದಂತೆ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿ, ವಿವಿಧ ಸಂಘಟನೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಉಪಸ್ಥಿತರಿದ್ದರು.