ಬೆಳ್ತಂಗಡಿ: ಪಟ್ರಮೆ ಗ್ರಾಮದ ಸಂಕೇಶ ಎಂಬಲ್ಲಿ ಕೋಟಿಯ್ಯಪ್ಪ ಎಂಬಾತ ತನ್ನ ವಾಸದ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟದ ಉದ್ದೇಶಕ್ಕಾಗಿ ತಯಾರಿಸುತ್ತಿರುವ ಮಾಹಿತಿ ಪಡೆದ ಅಬಕಾರಿ ಇಲಾಖೆ ದಾಳಿ ನಡೆಸಿ 5 ಲೀ ಕಳ್ಳಭಟ್ಟಿ ಸಾರಾಯಿ ಹಾಗೂ ಪರಿಕರಣಗಳನ್ನು ವಶಪಡಿಸಿಕೊಂಡ ಪ್ರಕರಣಮಾ. 31 ರಂದು ವರದಿಯಾಗಿದೆ.
ಆರೋಪಿ ಕೋಟಿಯ್ಯಪ್ಪ ಸ್ಥಳದಿಂದ ಪರಾರಿಯಾಗಿದ್ದು, ಅಬಕಾರಿ ನಿರೀಕ್ಷಕರು ಕೇಸ್ ದಾಖಲಿಸಿರುತ್ತಾರೆ. ಅಬಕಾರಿ ಉಪ ಆಯುಕ್ತಕರು, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ಹಾಗೂ ಅಬಕಾರಿ ಉಪ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗ ರವರ ನಿರ್ದೆಶನದಂತೆ, ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಬಕಾರಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಗಸ್ತು ನಡೆಸುತ್ತಿರುವ ವೇಳೆ ಈ ಪ್ರಕರಣ ಪತ್ತೆಯಾಗಿದೆ.
ಸ್ಥಳದಿಂದ ಕಳ್ಳಭಟ್ಟಿ ಸಾರಾಯಿಯನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ ಸುಮಾರು 5,200 ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ನವೀನ್, ಉಪ ನಿರೀಕ್ಷಕ ಸಯ್ಯದ್ ಶಬೀರ್ ಹಾಗೂ ಕಾನ್ಸ್‌ಟೇಬಲ್ ಭೋಜ ಕೆ., ವಿನೋಯ್ ಸಿ.ಜಿ ಮತ್ತು ವಾಹನ ಚಾಲಕ ನವೀನ್ ಪಿ. ಭಾಗವಹಿಸಿದ್ದರು. ಪ್ರಕರಣವನ್ನು ನವೀನ್ ಕುಮಾರ್ ನಿರೀಕ್ಷಕರು, ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.