ಧರ್ಮಸ್ಥಳ: ಧರ್ಮಸ್ಥಳದ ರಂಗಶಿವ ಕಲಾಬಳಗ ತಂಡದ ವತಿಯಿಂದ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ.ಹರ್ಷೇಂದ್ರ ಕುಮಾರ್ ಮತ್ತು ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರ ಸಹಕಾರದೊಂದಿಗೆ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ 6ನೇ ತರಗತಿಯಿಂದ 9ನೇ ತರಗತಿವರೆಗಿನ ಮಕ್ಕಳಿಗೆ “ನಲಿಯೋಣು ಬಾ 2023 “ಬೇಸಿಗೆ ಶಿಬಿರವನ್ನು ಶ್ರೀ ಕ್ಷೇತ್ರದ ಚಂದ್ರನಾಥ ಸ್ವಾಮಿ ಬಸದಿಯ ಚಂದ್ರಶಾಲೆಯಲ್ಲಿ ಎ.2 ರಂದು ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆಯವರು ಮಕ್ಕಳೊಂದಿಗೆ ದೀಪ ಬೆಳಗಿಸಿ ,ಗಿಡಕ್ಕೆ ನೀರುಣಿಸುವುದರೊಂದಿಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಬಿರಾರ್ಥಿಗಳು ಶಿಬಿರದಲ್ಲಿ ಮುಕ್ತವಾಗಿ ಬೆರೆತು ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ರಂಗಕಲೆಗಳ ಮೂಲಕ ಒರೆಗೆ ಹಚ್ಚಿ ಅಭಿವ್ಯಕ್ತಗೊಳಿಸಿ ಸೃಜನಶೀಲ ರಂಗ ಚಟುವಟಿಕೆಗಳ ಮೂಲಕ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿ. ರಂಗ ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ಕಲಾವಿದರಾಗಿ ಗುರುತಿಸಿಕೊಂಡು ಸಾಧನೆಯ ಶಿಖರವೇರಬಹುದು ಎಂದು ಸಲಹೆ ನೀಡಿದರು. ಅವರು ತನ್ನ ಬಾಲ್ಯದ ಸಂತೋಷದ ಕ್ಷಣಗಳನ್ನು ,ಅನುಭವಗಳನ್ನು ಮಕ್ಕಳಿಗೆ ಅರ್ಥಪೂರ್ಣವಾಗಿ ಮನಮುಟ್ಟುವಂತೆ ಹೇಳಿ ತಮ್ಮ ಜೀವನಾನುಭವದ ಮಧುರ ಕ್ಷಣಗಳನ್ನು ಮಕ್ಕಳಿಗೆ ಹೇಳಿ ಬಾಲ್ಯವನ್ನು ಧನ್ಯತೆಯಿಂದ ಸ್ಮರಿಸಿಕೊಂಡರು.
ಇಂದಿನ ಯುವ ಜನಾಂಗ ಮೊಬೈಲ್ ಎಂಬ ಮಾಯಾಜಾಲಕ್ಕೆ ಬಲಿಯಾಗದೆ ತಮ್ಮ ಸುತ್ತು ಮುತ್ತಲಿನ ಗಿಡಮರ, ಪಶುಪಕ್ಷಿ, ಪ್ರಾಣಿಗಳು, ಹಣ್ಣುಗಳು, ಹೂಗಳ ಬಗ್ಗೆ ಮಾಹಿತಿ ಕಲೆಹಾಕಿ ,ಅನ್ನಾಹಾರ ಅಪವ್ಯಯ ಮಾಡದೇ ,ಪ್ರಕೃತಿ ಪರಿಸರ ಸಂರಕ್ಷಣೆ ಮಾಡುತ್ತೇವೆಂಬ ದೃಢ ಸಂಕಲ್ಪ ಮಾಡುವಂತೆ ಕಿವಿಮಾತು ಹೇಳಿದರು. ರಂಗಶಿವ ಕಲಾಬಳಗದ ಅಧ್ಯಕ್ಷ ರಾಜೇಂದ್ರದಾಸ್ ಪ್ರಸ್ತಾವಿಸಿ, 12 ದಿನಗಳ ಶಿಬಿರದಲ್ಲಿ ಪ್ರಕೃತಿ ಪರಿಸರ ವೀಕ್ಷಣೆ, ವನವಿಹಾರ, ಹಾವುಗಳು ಹಾಗು ಪ್ರಾಣಿ ಪಕ್ಷಿಗಳ ಪರಿಚಯ, ನಟನೆಯ ತರಬೇತಿ, ಜಾನಪದ ಹಾಡುಗಳು, ಅಜ್ಜಿ ಕತೆಗಳು, ತುರ್ತು ಸೇವಾ ವಿಭಾಗಗಳು, ಗಿಡಮೂಲಿಕೆ, ಔಷಧೀಯ ಸಸ್ಯಗಳು, ಕಾಡುಗಿಡ ಮತ್ತು ಹಣ್ಣುಗಳು, ವಿವಿಧ ರೀತಿಯ ಎಲೆ ಗಳು, ಪುರಾಣ ಕಥೆಗಳು, ಹಿರಿಯರಿಂದ ಹಳೆಯ ಕಾಲದ ಜಾನಪದ ಕಟ್ಟುಕತೆಗಳ ಜತೆಗೆ 4 ಪೂರ್ಣಾವಧಿಯ ನಾಟಕ ತರಬೇತಿ ಇತ್ಯಾದಿ ಚಟುವಟಿಕೆಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಸುನಿಲ್ ಶೆಟ್ಟಿ ಕಲ್ಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಭುಜಬಲಿ ಧರ್ಮಸ್ಥಳ,ಮಲ್ಲಿನಾಥ ಜೈನ್ , ರಂಗಶಿವ ತಂಡದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.