ಮುಂಡಾಜೆ : ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಂಬೆಟ್ಟು ಪರಿಸರದಲ್ಲಿ ಮತ್ತೆ ಚಿರತೆ ಹಾವಳಿ ಕಂಡುಬಂದಿದೆ. ಕಳೆದ ಒಂದು ವಾರದಿಂದ ಪರಿಸರದ ಸುಮಾರು ಐದು ನಾಯಿಗಳು ಚಿರತೆಗೆ ಬಲಿಯಾಗಿರುವ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. .
ಚಾರ್ಮಾಡಿ-ಕನಪಾಡಿ ರಕ್ಷಿತಾರಣ್ಯದ ಸಮೀಪ ಇರುವ ದುಂಬೆಟ್ಟಿನ ಚಾಮುಂಡಿನಗರ, ಪಣಿಕಲ್ಲು, ಕಜೆ ಮೊದಲಾದ ಪರಿಸರದಲ್ಲಿ ಸಂಚರಿಸುತ್ತಿರುವ ಚಿರತೆಗೆ ಸುಧಾಕರ ಗೌಡ, ಜಯಾನಂದ ಪಣಿಕಲ್ಲು, ಈಶ್ವರ, ವಿಶ್ವನಾಥ ಗೌಡ ಮೊದಲಾದವರ ಸಾಕುನಾಯಿಗಳು ಕಾಣೆಯಾಗಿದ್ದು ಚಿರತೆಗೆ ಬಲಿಯಾಗಿರುವ ಅನುಮಾನವಿದೆ .
ಕಳೆದ ಎರಡು ದಿನಗಳ ಹಿಂದೆ ಸ್ಥಳೀಯ ವಿಜಯಾ ಎಂಬವರು ಬೆಳಗಿನ ಹೊತ್ತು ತರಗೆಲೆ ಸಂಗ್ರಹಿಸಲು ಕಾಡಿನತ್ತ ತೆರಳುತ್ತಿದ್ದಾಗ ಚಿರತೆಯನ್ನು ಹತ್ತಿರದಿಂದ ಕಂಡಿರುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ಹುಲಿಗಣತಿ ಅಂಗವಾಗಿ ನಡೆದ ಕ್ಯಾಮರಾ ಟ್ರಾಪಿಂಗ್ ವೇಳೆ ಸಮೀಪದ ಚಿಬಿದ್ರೆ ಅರಣ್ಯದಲ್ಲಿ ಚಿರತೆ ಸಂಚರಿಸಿದ ಕುರುಹು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಒಂದೆರಡು ಬಾರಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಗೂ ಚಿರತೆ ಎದುರಾಗಿತ್ತು.
ಸ್ಥಳೀಯರಲ್ಲಿ ಆತಂಕ.
ದುಂಬೆಟ್ಟು ಹಾ ಸಮೀಪದ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಹೈನುಗಾರರು ಇದ್ದಾರೆ. ಇವರೆಲ್ಲರೂ ಜಾನುವಾರುಗಳನ್ನು ಕೊಟ್ಟಿಗೆಗಳಲ್ಲಿ ಕಟ್ಟಿ ಸಾಕುತ್ತಿದ್ದಾರೆ. ಕಾಡಿನ ದಾರಿಯ ಮೂಲಕ ಹಾಲು ಉತ್ಪಾದಕರ ಸಂಘಗಳಿಗೆ ಹಾಲನ್ನು ನೀಡಲು ಮಕ್ಕಳು, ಮಹಿಳೆಯರು ಸಂಚರಿಸುತ್ತಾರೆ. ಶಾಲಾ ವಿದ್ಯಾರ್ಥಿಗಳು ಇದೇ ದಾರಿಯಾಗಿ ಸಂಚರಿಸಬೇಕಾಗಿದೆ. ಚಿರತೆ ಹಾವಳಿಯಿಂದ ಪ್ರದೇಶದ ಜನರಲ್ಲಿ ಆತಂಕ ಉಂಟಾಗಿದ್ದು ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.