ಬೆಳ್ತಂಗಡಿ: ಭಾರತೀಯ ಭೂಸೇನೆಯ ನಿವೃತ್ತ ಯೋಧ, 2016ರಲ್ಲಿ ಕರ್ತವ್ಯ ನಿಮಿತ್ತ ವಾಯುಸೇನೆಯ ವಿಮಾನದಲ್ಲಿ ಅಂಡಮಾನ್‌ಗೆ ತೆರಳುವ ವೇಳೆ ನಿಗೂಢವಾಗಿ ಕಣ್ಮರೆಯಾಗಿ ಇನ್ನೂ ಪತ್ತೆಯಾಗದ ವಿಮಾನದಲ್ಲಿದ್ದ, ಗುರುವಾಯನಕೆರೆಯ ಸುಬೇದಾರ್ ಏಕನಾಥ ಶೆಟ್ಟಿಯವರಿಗೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ರಾಜ್ಯ ಶೌರ್ಯ ಪ್ರಶಸ್ತಿಯನ್ನು ಎ.5ರಂದು ಪ್ರದಾನ ಮಾಡಲಾಯಿತು.
ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ವತಿಯಿಂದ ಮಂಗಳೂರಿನ ಅಲೋಶಿಯಸ್ ಕಾಲೇಜಿನ ಲೊಯೊಲ್ಲೊ ಸಭಾಂಗಣದಲ್ಲಿ ವೀರ ರೈತಾಪಿ ಸೇನೆಯ ವತಿಯಿಂದ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ-ಸಂಸ್ಕರಣ ದಿನ ಕಾರ್ಯಕ್ರಮದಲ್ಲಿ ಏಕನಾಥ ಶೆಟ್ಟಿಯವರ ಪತ್ನಿ ಜಯಂತಿ ಶೆಟ್ಟಿ ಹಾಗೂ ಮಕ್ಕಳು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀರಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮಿ, ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಯು.ಕೆ ಅಬ್ದುಲ್ ಅಝೀಝ್ ದಾರಿಮಿ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ ಚಿದಾನಂದ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ ತೀರ್ಥರಾಮ, ತುಳುಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸರ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಸಮಿತಿ ಉಪಾಧ್ಯಕ್ಷ ಪಿ.ಎಚ್ ಆನಂದ್ ನೆರಿಯ, ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಉಜಿರೆ, ಕುಶಾಲಪ್ಪ ಗೌಡ ಪೂವಾಜೆ, ಬಾಲಕೃಷ್ಣ ಗೌಡ ಕೇರಿಮಾರ್, ಸುಧೀರ್ ಪೈ ಮೊದಲಾದವರು ಉಪಸ್ಥಿತರಿದ್ದರು.
ಕುತ್ತಾರಿನ ಯೋಧ ಏಕನಾಥ ಶೆಟ್ಟಿ 1985ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಗೊಂಡು ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಹಸ ಮೆರೆದು ಸೇನಾ ಪದಕ ಪಡೆದಿದ್ದಾರೆ. 2009ರಲ್ಲಿ ಸುಬೇದಾರ್ ರ‍್ಯಾಂಕ್‌ನೊಂದಿಗೆ ಸೇವಾನಿವೃತ್ತಿ ಹೊಂದಿದ್ದರು. ಆದರೆ ಊರಿನ ದೊರೆತ ಉದ್ಯೋಗ ತ್ಯಜಿಸಿ ಮತ್ತೆ ಸೇನೆಯ ರಕ್ಷಣಾ ವಿಭಾಗಕ್ಕೆ ಸೇರ್ಪಡೆಗೊಂಡು ಕೇರಳದ ಕಣ್ಣೂರಿನಲ್ಲಿ ತರಬೇತಿ ಮುಗಿಸಿ ವಾಯುಸೇನೆಯಲ್ಲಿ ಎನ್‌ಸಿಸಿ ತರಬೇತುದಾರರಾಗಿ ನೇಮಕಗೊಂಡಿದ್ದರು. 2016ರ ಜುಲೈ 22ರಂದು ಸೇನಾ ಕರ್ತವ್ಯ ನಿಮಿತ್ತ ಚೆನ್ನೈನ ತಾಂಬರಂ ವಾಯುನೆಲೆಯಿಂದ ಅಂಡಮಾನ್ ಪೋರ್ಟ್‌ಬ್ಲೇರ್‌ಗೆ ವಿಮಾನದಲ್ಲಿ ತೆರಳುತ್ತಿದ್ದಾಗ ವಿಮಾನ ನಿಗೂಢವಾಗಿ ನಾಪತ್ತೆಯಾಗಿ ಈವರೆಗೂ ಸುಳಿವು ದೊರೆತ್ತಿಲ್ಲ. ವಿಮಾನದಲ್ಲಿದ್ದ ೨೯ ಮಂದಿ ಸೈನಿಕರಲ್ಲಿ ಬೆಳ್ತಂಗಡಿ ತಾಲೂಕಿನ ಯೋಧ ಏಕನಾಥ ಶೆಟ್ಟಿ ಇದ್ದರು.