ಪುದುವೆಟ್ಟು : ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನ ಮಹಿಳೆಯೊಬ್ಬರು ಪುತ್ತೂರು ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ತನ್ನ ತಾಯಿ ಮನೆಯಲ್ಲಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಎ.10ರಂದು ನಡೆದಿರುವುದು ವರದಿಯಾಗಿದೆ.
ಪುದುವೆಟ್ಟು ಗ್ರಾಮದ ಉದ್ದದಪಳಿಕೆ ನಿವಾಸಿ ಪುರುಷೋತ್ತಮ ಅವರ ಪತ್ನಿ ಪುಣ್ಯಶ್ರೀ ಮೃತಪಟ್ಟವರಾಗಿದ್ದಾರೆ. 2017ರಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆಯ ಬಾಲಕೃಷ್ಣ ಎಂಬವರ ಮಗಳಾದ ಪುಣ್ಯಶ್ರೀ ಅವರನ್ನು ಪುರುಷೋತ್ತಮ ಅವರು ವಿವಾಹವಾಗಿದ್ದು, ಇವರಿಗೆ 5 ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದಾರೆ.
ಎ.4 ರಂದು ಪುಣ್ಯಶ್ರೀಯವರು ತನ್ನ ಇಬ್ಬರು ಮಕ್ಕಳೊಂದಿಗೆ ಆಕೆಯ ತವರು ಮನೆಯಾದ ಗುಮ್ಮಟಗದ್ದೆಗೆ ಹೋಗಿದ್ದು, ಬಳಿಕ ಅಲ್ಲಿಯೇ ಇದ್ದರು. ಎ.10 ರಂದು ಮಧ್ಯಾಹ್ನ ಪುರುಷೋತ್ತಮರವರು ಪುಣ್ಯಶ್ರೀಯವರಿಗೆ ಮೊಬೈಲ್ ಕರೆ ಮಾತನಾಡಿದ್ದರು. ಸಂಜೆ ಪುಣ್ಯಶ್ರೀಯವರು ತನ್ನ ಗಂಡ ಪುರುಷೋತ್ತಮ ಅವರಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದರು. ಅದೇ ದಿನ ರಾತ್ರಿ 10.24 ಗಂಟೆಗೆ ಪುರುಷೋತ್ತಮ ಅವರಿಗೆ ಪುಣ್ಯಶ್ರೀಯ ಚಿಕ್ಕಮ್ಮ ಲತಾ ಎಂಬವರು ಕರೆ ಮಾಡಿ, ರಾತ್ರಿ ಸುಮಾರು 10.00 ಗಂಟೆಯ ವೇಳೆಗೆ ಪುಣ್ಶಶ್ರೀಯು ತಮ್ಮ ಮನೆಯ ಬಳಿಗೆ ಬಂದು ತಾನು ಸಾಯುವುದಾಗಿ ಹೇಳಿ ಏಕಾಏಕಿ ತಮ್ಮ ಬಾವಿಗೆ ಹಾರಿರುವುದಾಗಿ ಮಾಹಿತಿ ನೀಡಿದ್ದರು. ಅದರಂತೆ ಪುರುಷೋತ್ತಮ ಅವರು ಕೂಡಲೇ ತನ್ನ ಪುದುವೆಟ್ಟಿನ ಮನೆಯಿಂದ ಹೊರಟು ಗುಮ್ಮಟಗದ್ದೆಗೆ ಬಂದಾಗ ಪುಣ್ಶಶ್ರೀಯನ್ನು ಬಾವಿಯ ನೀರಿನಿಂದ ಮೇಲಕ್ಕೆತ್ತಿದ್ದು, ಬಳಿಕ ಪುಣ್ಶಶ್ರೀಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಪುಣ್ಯಶ್ರೀಯು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂಬ್ರ 09/2023 ಕಲಂ: 174 (3) (iv) ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.