ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರು ಎ.17ರಂದು ನಾಮಪತ್ರ ಸಲ್ಲಿಸಲಿದ್ದು, ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ 241 ಬೂತುಗಳಿಂದ ಸುಮಾರು 25 ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಎ.12ರಂದು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಅಂದು ಬೆಳಿಗ್ಗೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಚುನಾವಣಾ ಸಭೆ ನಡೆಯಲಿದೆ. ಸಭೆಯಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರರಾದ ನಿಕೇತ್ ರಾಜ್ ಮೌರ್ಯರವರು ಪ್ರಧಾನ ಭಾಷಣ ಮಾಡಲಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಗಂಗಾಧರ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ ಕೆಪಿಸಿಸಿ ಸಂಯೋಜಕರಾದ ಶಾಹಿದ್ ತೆಕ್ಕಿಲ್ಲ್ ಮತ್ತು ಜಿಲ್ಲಾ ಮುಟ್ಟದ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯ ನಂತರ ಮೆರವಣಿಗೆಯಲ್ಲಿ ಬಂದು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಬೆಳ್ತಂಗಡಿ ತಾಲೂಕಿನ ೨೪೧ ಬೂತುಗಳಲ್ಲಿ ಕಾರ್ಯಕರ್ತರು ಮತದಾರರ ಮನೆ, ಮನೆಗಳಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನ್ನು ವಿತರಿಸಿದೆ. ಕಳೆದ ಭಾರಿ ಕಾಂಗ್ರೆಸ್ ತನ್ನ ಚುನಾವಣೆಯಲ್ಲಿ 165 ಆಶ್ವಾಸನೆಗಳನ್ನು ಘೋಷಿಸಿತ್ತು. ಸಿದ್ದರಾಮಯ್ಯ ನೇತೃತ್ವ ಸರಕಾರ 168 ಆಶ್ವಾಸನೆಗಳನ್ನು ಈಡೇರಿಸಿದೆ. ಪ್ರತಿ ಮನೆಯ ಒಡತಿಗೆ ರೂ.2 ಸಾವಿರ ನೀಡುವುದು, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ಕಾಂಗ್ರೆಸ್‌ನ ಗ್ಯಾರಂಟಿಯಲ್ಲಿ ಸೇರಿದೆ. ರಾಜ್ಯದಲ್ಲಿ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಂಗೇರ ಭವಿಷ್ಯ ನುಡಿದರು.
ಅಭ್ಯರ್ಥಿ ರಕ್ಷಿತ್ ಶಿವರಾಂ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಎ.17ರಂದು ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೆ ಕಿನ್ಯಮ್ಮ ಸಭಾ ಭವನದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಗ್ರಾಮ ಪಂಚಾಯತುಗಳ ಬಿಜೆಪಿ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ‍್ಪಡೆಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುಮಾರು ೨೫ ಸಾವಿರ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿಲಿದ್ದು, ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿ ಕಾರ್ಡ್‌ನ್ನು ಕಾರ್ಯಕರ್ತರು ಮನೆ, ಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಮಾತನಾಡಿ, ಎ.17ರಂದು ನಡೆಯುವ ಕಾರ್ಯಕರ್ತರ ಸಮಾವೇಶಕ್ಕೆ ತಾಲೂಕಿನ ಪ್ರತಿ ಬೂತಿನಿಂದ ನೂರರಂತೆ ಕಾರ್ಯಕರ್ತರು ಬರುತ್ತಾರೆ. ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು. ಗಂಗಾಧರ ಗೌಡರಲ್ಲಿ ಮಾತನಾಡುತ್ತೇನೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಗಂಗಾಧರ ಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ಬಳಿಕ ನಡೆದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ, ಪತ್ರಿಕಾಗೋಷ್ಠಿಗೂ ಬಂದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ವಸಂತ ಬಂಗೇರ ಅವರು ಟಿಕೇಟ್ ನೀಡದಿರುವ ಬಗ್ಗೆ ಬೇಸರ ಸಾಮಾನ್ಯ ಇದರ ಬಗ್ಗೆ ಗಂಗಾಧರ ಗೌಡರಲ್ಲಿ ಮಾತನಾಡಿ, ಎಲ್ಲವನ್ನು ಸರಿಮಾಡುತ್ತೇನೆ ಎಂದು ಬಂಗೇರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ. ಗೌಡ, ಪ್ರಮುಖರಾದ ಸಲೀಂ ಗುರುವಾಯನಕೆರೆ, ಈಶ್ವರ ಭಟ್ ಮಾಯಿಲ್ತೋಡಿ, ಮನೋಹರ ಇಳಂತಿಲ, ರಾಜಶೇಖರ ಶೆಟ್ಟಿ ಮಡಂತ್ಯಾರು, ಸೆಭಾಸ್ಟಿನ್ ಕಳೆಂಜ, ವಿನ್ಸೆಂಟ್ ಮಡಂತ್ಯಾರು, ಪದ್ಮನಾಭ ಸಾಲಿಯಾನ್ ಮಾಲಾಡಿ ಉಪಸ್ಥಿತರಿದ್ದರು.