ಸೈಕಲ್ ಯಾತ್ರೆಯ ಮೂಲಕ ದೇಶದ ನಾನಾ ರಾಜ್ಯಗಳನ್ನು ಸುತ್ತಿ ಕೃಷಿ ಅಧ್ಯಯನ ಕೈಗೊಳ್ಳಲು ಮುಂದಾಗಿರುವ ಕೇರಳದ ಯುವಕ, ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಮೂಲಕ ಬುಧವಾರ ಬೆಂಗಳೂರಿನತ್ತ ಪ್ರಯಾಣ ಕೈಗೊಂಡಿದ್ದಾನೆ.
ಕೇರಳ ರಾಜ್ಯದ ಪತಂಗತ ಅಡೂರು ಎಂಬಲ್ಲಿನ ಯುವಕ ಮನ್ನಾಲಾಲ್(25) ಭಾರತದ ನಾನಾ ರಾಜ್ಯಗಳನ್ನು ಸುತ್ತಿ ಅಲ್ಲಿನ ಭತ್ತದ ಗದ್ದೆಗಳ ಬೇಸಾಯ ಪದ್ಧತಿ, ಮಣ್ಣಿನ ಫಲವತ್ತತೆ ರೈತರ ಸಮಸ್ಯೆಗಳ ಕುರಿತ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಈ ವರ್ಷ ಫೆ. 12ರಂದು ಸೈಕಲ್ ಯಾತ್ರೆ ಆರಂಭಿಸಿದ್ದಾನೆ.
ವಿಶಿಷ್ಟವಾಗಿ ಮಾರ್ಪಡಿಸಲಾದ ಸೈಕಲ್ ಮೂಲಕ ಎರಡು ತಿಂಗಳ ಕಾಲ ತನ್ನ ತವರೂರಾದ ಕೇರಳವನ್ನು ಸುತ್ತಿದ ಈತ ಏ. 11ರಂದು ತಲಪಾಡಿ ಮೂಲಕ ಕರ್ನಾಟಕ ಪ್ರವೇಶಿಸಿ, ಏ.12ರಂದು ಬೆಳ್ತಂಗಡಿಗೆ ತಲುಪಿ, ಇಲ್ಲಿನ ಭತ್ತದ ಕೃಷಿಯ ಬಗ್ಗೆ ಅಧ್ಯಯನ ನಡೆಸಿದ್ದಾನೆ.
ಒಟ್ಟು 24 ತಿಂಗಳ ಅವಧಿಯಲ್ಲಿ ಸೈಕಲ್ ಮೂಲಕ ಇಡೀ ದೇಶವನ್ನು ಸುತ್ತಿ ಭತ್ತದ ಕೃಷಿ ಕುರಿತು ಅಧ್ಯಯನ ನಡೆಸುವ ಗುರಿಯನ್ನು ಹೊಂದಿದ್ದಾನೆ. ನಶಿಸಿ ಹೋಗುತ್ತಿರುವ ಗದ್ದೆ ಬೇಸಾಯಕ್ಕೆ ಪುನರುಜ್ಜೀವನ ನೀಡುವ ಉದ್ದೇಶ ಹೊಂದಿರುವ ಈತ ರೈತರ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾನೆ.
ಗೆಳೆಯರ ಹಾಗೂ ಮನೆಯವರ ಪ್ರೋತ್ಸಾಹ ತನ್ನ ಯಾತ್ರೆಗೆ ಪ್ರೇರಣೆಯಾಗಿದೆ. ಭಾರತದ ಬೆನ್ನೆಲುಬಾಗಿರುವ ಕೃಷಿಯಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾಣುವ ಅಗತ್ಯವಿದೆ. ನಾವು ತಿನ್ನುವ ಅನ್ನದ ಮೂಲ ಭತ್ತದ ಗದ್ದೆಗಳಾಗಿದ್ದು ಇಲ್ಲಿ ನೂತನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳುತ್ತಾನೆ.
ಅಲ್ಲಲ್ಲಿ ಆಶ್ರಯ.
ದಿನವೊಂದಕ್ಕೆ ಸುಮಾರು 50 ಕಿಮೀ. ಸೈಕಲ್ ಯಾತ್ರೆ ಕೈಗೊಳ್ಳುವ ಈತನಿಗೆ ಆಯಾಯ ಪರಿಸರದ ಹಲವರು ಆಶ್ರಯ, ಅನ್ನಾಹಾರ ನೀಡುತ್ತಿದ್ದಾರೆ. ಇಂತಹ ಯಾರು ಸಿಗದ ಸಂದರ್ಭದಲ್ಲಿ ಬಸ್ ಸ್ಟ್ಯಾಂಡ್ ಅಥವಾ ಧಾರ್ಮಿಕ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾನೆ. ಚಾರ್ಮಾಡಿ ಘಾಟಿ ಮೂಲಕ ಬೆಂಗಳೂರು ತಲುಪಿ ಅಲ್ಲಿಂದ ಹೈದರಾಬಾದ್ ಗೆ ಹೋಗಿ ಬಳಿಕ ಯೋಜನೆ ರೂಪಿಸಿ ಮುಂದಿನ ರಾಜ್ಯವನ್ನು ಪ್ರವೇಶಿಸುವುದಾಗಿ ತಿಳಿಸಿದ್ದಾನೆ.
“ಎರಡು ವರ್ಷ ಅವಧಿಯಲ್ಲಿ ಕೇರಳದಿಂದ ಕಾಶ್ಮೀರ ತನಕ ಸೈಕಲ್ ಯಾತ್ರೆ ನಡೆಸಿ ಕೃಷಿ ಅಧ್ಯಯನ ಕೈಗೊಳ್ಳುವ ಗುರಿ ಇದೆ. ಆಯಾ ರಾಜ್ಯಗಳಲ್ಲಿ ಬಳಸುವ ಅಗತ್ಯ ಪದಗಳನ್ನು ಕಲಿತುಕೊಂಡಿದ್ದೇನೆ. ಅಲ್ಪ ಸ್ವಲ್ಪ ಕನ್ನಡ ಪದಗಳು ಗೊತ್ತಿವೆ.
ತೀವ್ರ ಬಿಸಿಲು ಇರುವ ಕಾರಣ ಪ್ರಸ್ತುತ ದಿನವೊಂದಕ್ಕೆ 50 ಕಿಮೀ ಮಾತ್ರ ಕ್ರಮಿಸುತ್ತಿದ್ದೇನೆ.”
-ಮನ್ನಾ ಲಾಲ್, ಸೈಕಲ್ ಯಾತ್ರಿ.