ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ಬೆಂಬಲಿಗರು ಫೇಸ್ ಬುಕ್‌ನಲ್ಲಿ ನನ್ನ ಬಗ್ಗೆ ಸುಳ್ಳು ಸಂದೇಶಗಳನ್ನು ಹರಡುತ್ತಿದ್ದು ಇದು ನನ್ನ ಸ್ಪರ್ಧೆಯಿಂದ ಅವರಿಗೆ ಹಿನ್ನಡೆಯಾಗುವ ಭಯದಲ್ಲಿ ಮಾಡುತ್ತಿದ್ದಾರೆ ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ಶಾಸಕರು ಅಲ್ಪಸಂಖ್ಯಾತರ ಪರವಾಗಿ ಮಾತನಾಡುತ್ತಿಲ್ಲ ನಾವು ಎರಡು ಪಕ್ಷವನ್ನು ಸಮಾನ ದೂರದಲ್ಲಿ ಇಟ್ಟು ಕೆಲಸ ಮಾಡುತ್ತಿದ್ದೇವೆ ಎಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಶ್ರಫ್‌ಆಲಿಕುಂಞಿ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಸುವರ್ಣ ಆರ್ಕೇಡ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜನಪರ, ರೈತ ಪರ, ಮಹಿಳಾ ಪರ, ಅಲ್ಪಸಂಖ್ಯಾತರ ಪರ ನಿಲುವು ಹೊಂದಿರುವ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಕುಮಾರ ಸ್ವಾಮಿಯವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ತಿಳಿಸಿದರು. ಬಡತನ ಕುಟುಂಬದಿಂದ ಬಂದ ತಾನು ತಂದೆಯವರ ಸೈಕಲ್ ರಿಪೇರಿ ವೃತ್ತಿಯನ್ನು ಮಾಡಿ, ಸಾಹಿತ್ಯದಿಂದ ಆಕರ್ಷಿತನಾಗಿ, ಪತ್ರಕರ್ತನಾಗಿ, ಸಾಹಿತ್ಯದ ಸೇವೆಯನ್ನು ಮಾಡಿಕೊಂಡು ಬಂದಿದ್ದೇನೆ. ಹಲವಾರು ಮಾನವೀಯ, ಅಭಿವೃದ್ಧಿ ಪರ ವರದಿ ಮಾಡಿ ಅವರಿಗೆ ಸರಕಾರ ಹಾಗೂ ಖಾಸಗಿ ಸಂಸ್ಥೆಗಳ ನೆರವು ದೊರೆಯುವಲ್ಲಿ ಶ್ರಮಿಸಿದ್ದೇನೆ. ನನ್ನ ಪ್ರಮಾಣಿಕತೆಯನ್ನು ಗುರುತಿಸಿ ನನಗೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷ ಸಿ.ಎಂ ಇಬ್ರಾಹಿಂ, ಭೋಜೇ ಗೌಡ, ಬಿ.ಎಮ್ ಫಾರೂಕ್ ಸ್ಪರ್ಧೆಗೆ ಅವಕಾಶ ಕೊಟ್ಟಿದ್ದಾರೆ ಎಂದರು. ಜೆಡಿಎಸ್ ಪಕ್ಷಕ್ಕೆ ತಾಲೂಕಿನಲ್ಲಿ ಮತಗಳಿದ್ದು ಸಂಘಟಮೆಯಲ್ಲಿ ಹಿಂದೆ ಬಿದ್ದಿರಬಹುದು. ಇಲ್ಲಿ ಮಾಜಿ ಶಾಸಕ ವಸಂತ ಬಂಗೇರ ಶಾಸಕರಾಗಿ ಆಯ್ಕೆಯಾಗಿದ್ದೂ ಮಾತ್ರವಲ್ಲದೆ ಮುಖ್ಯ ಸಚೇತಕ ಹುದ್ದೆಯನ್ನು ಪಡೆದಿದ್ದರು. ತಾಲೂಕಿನಲ್ಲಿ ಕಳೆದ 23 ವರ್ಷಗಳಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸಿ, ಪ್ರತಿ ಗ್ರಾಮ ಗ್ರಾಮದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ತಾಲೂಕಿನ ಸಮಸ್ಯೆಗಳನ್ನು ಪರಿಹರಿಸಲು ಮೊದಲ ಆಧ್ಯತೆ ನೀಡುತ್ತೇನೆ ಎಂದು ಹೇಳಿದರು. ತಾಲೂಕಿನಲ್ಲಿ ಪಕ್ಷ ಸಂಘಟಿಸಲು ಅನೇಕ ಹಿರಿಯರು ತ್ಯಾಗಮಾಡಿದ್ದು ಅವರನ್ನೆಲ್ಲರನ್ನು ಸ್ಮರಿಸಿಕೊಂಡು ಹಿರಿ ಕಿರಿಯರ ಮಾರ್ಗದರ್ಶನದಲ್ಲಿ ಜನತೆಯ ಬಳಿ ಹೋಗುತ್ತೇನೆ. ತಾಲೂಕಿನಲ್ಲಿ 15ರಿಂದ 20 ಸಾವಿರ ಜೆಡಿಎಸ್ ಸಾಂಪ್ರದಾಯಿಕ ಮತಗಳಿವೆ ಎಂದರು. ಕಾಂಗ್ರೆಸ್ ಪಕ್ಷದ ಬೆಂಬಲಿಗರು ಫೇಸ್‌ಬುಕ್‌ನಲ್ಲಿ ಫೇಕ್ ಏಕೌಂಟ್ ಮಾಡಿ, ನನ್ನ ಬಗ್ಗೆ ಸುಳ್ಳು ಸಂದೇಶಗಳನ್ನು ಹರಡುತ್ತಿದ್ದು ಇದು ನನ್ನ ಸ್ಪರ್ಧೆಯಿಂದ ಅವರಿಗೆ ಹಿನ್ನಡೆಯಾಗುವ ಭಯದಲ್ಲಿ ಮಾಡುತ್ತಿದ್ದಾರೆ. ನನ್ನತನವನ್ನು ನಾನು ಯಾರಿಗೂ ಮಾರಿಕೊಳ್ಳಲು ಸಿದ್ದನಿಲ್ಲ. ಮಹಿಳೆಯರ ಅಲ್ಪಸಂಖ್ಯಾತರ, ನೊಂದವರ ಧ್ವನಿಯಾಗಿ ಮುಂದೆ ಕೆಲಸ ನಿರ್ವಹಿಸಲಿದ್ದು ಜಿ. ಪಂ., ತಾ. ಪಂ. ಚುನಾವಣೆಗೂ ಸಿದ್ಧತೆ ಮಾಡುತ್ತೇವೆ. ನಾನು ಹಲವಾರು ಸಾಮಾಜಿಕ ಸಂಘಟನೆಗಳಲ್ಲಿದ್ದು ಅದರ ಕೆಲಸಕ್ಕೆ ಈಸ್ಪರ್ಧೆ ಪೂರಕವಾಗಿದೆ. ಸಮುದಾಯ ಸಂಘಟನೆಯ ಸಿದ್ದಾಂತದಂತೆ ರಾಜಕೀಯ ಸ್ಪರ್ಧೆ ಮಾಡಿರುವುದರಿಂದ ಪದಾಧಿಕಾರಿ ಹುದ್ದೆಗೆ ಈಗಾಗಲೇ ರಾಜಿನಾಮೆ ನೀಡಿದ್ದೇನೆ ಎಂದರು. ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ಶಾಸಕರು ತಮ್ಮ ಅವಧಿಯಲ್ಲಿ ಒಂದು ಬಾರಿಯೂ ಅಲ್ಪಸಂಖ್ಯಾತರ ಪರ ಯಾವುದೇ ಧ್ವನಿ ಎತ್ತಿಲ್ಲ ಎಂದು ಆರೋಪಿಸಿದರು.
ಮೇ. 1ರಂದು ತಾಲೂಕಿನಲ್ಲಿ ಜೆಡಿಎಸ್ ಸಮಾವೇಶ;
ಮೇ.1 ರಂದು ಬೆಳ್ತಂಗಡಿಯಲ್ಲಿ ಜೆಡಿಎಸ್ ಪಕ್ಷದ ಸಮಾವೇಶ ನಡೆಸುವ ತಯಾರಿ ಮಾಡಲಾಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ, ಮುಖಂಡರುಗಳಾದ ಎಸ್ ಎಲ್ ಭೋಜೇಗೌಡ, ಬಿ. ಎಂ ಫಾರೂಕ್, ಎಂ ಬಿ ಸದಾಶಿವ, ಜಾಕೆ ಮಾಧವ ಗೌಡ ಸಹಿತ ರಾಜ್ಯದ, ಜಿಲ್ಲೆಯ ಅನೇಕ ಮುಖಂಡರುಗಳು ಜೆಡಿಎಸ್ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಕಾರ್ಯಧ್ಯಕ್ಷ ರಾಮಾಚಾರಿ, ಸಂಘಟನಾ ಕಾರ್ಯದರ್ಶಿ ಹೆಚ್ ಎನ್ ನಾಗರಾಜ್, ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಶಾಹಿದ್ ಪಾದೆ, ರಾಮಕೃಷ್ಣ ಗೌಡ ನೆರಿಯ ಉಪಸ್ಥಿತರಿದ್ದರು.