ಪತ್ರಿಕಾಗೋಷ್ಠಿ
ಬೆಳ್ತಂಗಡಿ : ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ಪರ್ಧಿಸುವ ಶಿಗ್ಗಾವಿ ಕ್ಷೇತ್ರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವ ವರುಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುದ್ದಿ ಆಂದೋಲನವನ್ನು ಹೆಚ್ಚು ಬಲಗೊಳಿಸುವ ಉದ್ದೇಶ ಹೊಂದಿದ್ದೇನೆ ಎಂದು ಸುದ್ದಿ ಜನಾಂದೋಲನ ವೇದಿಕೆಯ ಅಧ್ಯಕ್ಷ ಡಾ. ಯು.ಪಿ ಶಿವಾನಂದ ಹೇಳಿದರು.
ಅವರು ಎ.24ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುದ್ದಿ ಜನಾಂದೋಲನ ವೇದಿಕೆ ಮೂಲಕ ಲಂಚ, ಭ್ರಷ್ಟಾಚಾರವನ್ನು ಬಹಿಷ್ಕರಿಸಿ, ಅದರಿಂದ ತೊಂದರೆಯಾಗುವ ಜನರಿಗೆ ಪರಿಹಾರವನ್ನು, ಹಣವನ್ನು ತೆಗೆಸಿಕೊಡುವ ಪ್ರತಿಜ್ಞೆ ಮಾಡುವಂತೆ ಆಯಾಯ ಕ್ಷೇತ್ರದ ಅಭ್ಯರ್ಥಿಗಳಿಗೆ ಮತದಾರರ ಮೂಲಕ ಪ್ರಯತ್ನ ನಡೆಸಲಿದ್ದೇವೆ. ರಾಜ್ಯದ 224 ಕ್ಷೇತ್ರಗಳಲ್ಲಿ ಚುನಾವಣೆ ಇರುವುದರಿಂದ ಈ ಅವಕಾಶವನ್ನು ಉಪಯೋಗಿಸಿಕೊಂಡು ಈ ವಿಚಾರವನ್ನು ಮತದಾರರ ಮೂಲಕ ಅಭ್ಯರ್ಥಿಗಳ ಗಮನಕ್ಕೆ ತರಲಿದ್ದೇವೆ” ಎಂದು ಹೇಳಿದರು.
ನಾವು ಮತ ನೀಡಿ ಆರಿಸುವ ಅಭ್ಯರ್ಥಿ ಲಂಚ ಭ್ರಷ್ಟಾಚಾರವನ್ನು ನಿಲ್ಲಿಸುವವನೇ ಆಗಬೇಕು. ಪ್ರತಿಯೊಬ್ಬ ಮತದಾರ ತಾನು ಈ ಸಲ ಮತದಾನ ಮಾಡುವಾಗ ಇದನ್ನು ಅಭ್ಯರ್ಥಿಗಳ ಗಮನಕ್ಕೆ ತರುವಂತಹ ಕೆಲಸ ನಡೆಯಬೇಕು. ಇದಕ್ಕಾಗಿ ಫಲಕಗಳನ್ನು ಮನೆ, ಮನೆಗಳಲ್ಲಿ, ದಾರಿಗಳಲ್ಲಿ ಅಳವಡಿಸಬೇಕು. ಸುದ್ದಿ ಜನಾಂದೋಲನ ವೇದಿಕೆಯಿಂದ ಫಲಕಗಳನ್ನು ರೂ.೧೫ ಪಾವತಿಸಿ ಪಡೆದುಕೊಳ್ಳಬಹುದು ಎಂದರು ಹೇಳಿ, ಹಳ್ಳಿಯಿಂದ ಡೆಲ್ಲಿಗೆ ಆಡಳಿತವಾಗಬೇಕು ಡೆಲ್ಲಿಯಿಂದ ಹಳ್ಳಿಗೆ ಅಲ್ಲ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುದ್ದಿ ಪತ್ರಿಕೆಯ ಸಂಪಾದಕ ಸಂತೋಷ್ ಶಾಂತಿನಗರ, ಮುಖ್ಯ ವರದಿಗಾರ ಜಾರಪ್ಪ ಪೂಜಾರಿ, ಮನೀಶ್ ಅಂಚನ್ ಹಾಗೂ ಕೆ.ಎನ್. ಗೌಡ ಉಪಸ್ಥಿತರಿದ್ದರು.