ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಅಭಿವೃದ್ಧಿ ಅಗಲೀಕರಣ ಕಾಮಗಾರಿ ಆರಂಭ

Suddi Udaya

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು ಪ್ರಸ್ತುತ ರಸ್ತೆಯ ಅಗಲೀಕರಣದ ಕೆಲಸ ನಡೆಯುತ್ತಿದೆ. ಸುಮಾರು 700 ಕೋಟಿ ರೂ.ಗಿಂತ ಅಧಿಕ ಅನುದಾನದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ 33.1 ಕಿಮೀ ವ್ಯಾಪ್ತಿಯ ರಸ್ತೆ ಈ ಯೋಜನೆಯಲ್ಲಿ ಅಭಿವೃದ್ಧಿ ಹೊಂದಲಿದೆ. ಇದರ ಅಂಗವಾಗಿ ಸಾಕಷ್ಟು ಸಮೀಕ್ಷೆಗಳು ನಡೆದಿದ್ದು, ರಸ್ತೆ ಅಗಲೀಕರಣದ ವೇಳೆ ತೆರವುಗೊಳ್ಳಬೇಕಾದ ಮರ,ಕಟ್ಟಡಗಳ ಗುರುತಿಸುವಿಕೆ ಅಗತ್ಯ ಸ್ಥಳಗಳಲ್ಲಿ ಸೇತುವೆ ನಿರ್ಮಾಣದ ರೂಪುರೇಷೆ ಇತ್ಯಾದಿ ಸಿದ್ದಗೊಂಡಿದೆ. ರಸ್ತೆ ವ್ಯಾಪ್ತಿಯನ್ನು ಗುರುತಿಸಿ ಸರಕಾರಿ ಜಾಗದ ಮೂಲಕ ಹಾದು ಹೋಗುವ ರಸ್ತೆಯ ಸ್ಥಳಗಳ ಗಿಡಗಂಟಿ ತೆರವು ಕೆಲಸವು ಪೂರ್ಣಗೊಂಡಿದೆ.


ಗುತ್ತಿಗೆದಾರರಿಗೆ ಅನುಮೋದನೆ ದೊರೆತಿದ್ದು ಈಗ ಮುಂಡಾಜೆ ಗ್ರಾಮದ ಸೀಟು ಪ್ರದೇಶದಲ್ಲಿ ರಸ್ತೆಯನ್ನು ಅಗಲಗೊಳಿಸುವ ಕೆಲಸ ನಡೆಯುತ್ತಿದೆ. ಮುಖ್ಯ ರಸ್ತೆಯ ಸೆಂಟ್ರಲ್ ಮಾರ್ಕ್ ನಿಂದ ರಸ್ತೆಯ ಒಂದು ಬದಿಯನ್ನು ಸುಮಾರು ೭ ಮೀಟರ್ ಗಿಂತ ಅಧಿಕ ಪ್ರದೇಶದಲ್ಲಿ ಅಗಲಗೊಳಿಸಲಾಗುತ್ತಿದೆ. ಈ ರಸ್ತೆಯ ಒಂದು ಬದಿಯ ಮರಗಳಿಲ್ಲದ ಪ್ರದೇಶದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ.


ಧೂಳಿನ ಓಕುಳಿ : ರಸ್ತೆ ಕೆಲಸ ನಡೆಯುತ್ತಿರುವ ಕಾರಣ ರಾಷ್ಟ್ರೀಯ ಹೆದ್ದಾರಿಯ ಈ ಭಾಗದ ವಾಹನ ಸವಾರರಿಗೆ, ಪಾದಚಾರಿಗಳಿಗೆ ಧೂಳಿನ ಓಕುಳಿ ಉಂಟಾಗುತ್ತಿದೆ.ಇದರಿಂದ ಒಂದಿಷ್ಟು ಸಮಸ್ಯೆಯೂ ಎದುರಿಸುವಂತಾಗಿದೆ. ಆಳೆತ್ತರಕ್ಕಿಂತ ಅಧಿಕವಾಗಿ ಏಳುವ ಧೂಳಿನಿಂದ ಪರಿಸರವೆಲ್ಲ ಧೂಳುಮಯವಾಗಿ ಎದುರು ಬದುರು ಸಂಚರಿಸುವ ವಾಹನಗಳು ಕಾಣದ ಸ್ಥಿತಿ ಏರ್ಪಡುತ್ತಿದೆ.ರಜಾಕಾಲ, ಚುನಾವಣೆ ಸಂದರ್ಭವಾದ ಕಾರಣ ಈ ರಸ್ತೆಯಲ್ಲಿ ವಾಹನದ ದಟ್ಟಣೆಯೂ ವಿಪರೀತವಾಗಿದೆ.ಮಳೆಯೂ ಇಲ್ಲದ ಕಾರಣ ಧೂಳಿನ ಪ್ರಮಾಣ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದೆ.

Leave a Comment

error: Content is protected !!