ಧರ್ಮಸ್ಥಳ: ಸಂಬಂಧಿಕರಿಗೆ ಗೃಹಪ್ರವೇಶದ ಆಮಂತ್ರಣ ಪತ್ರಿಕೆ ನೀಡಲು ಚಿಕ್ಕಮಗಳೂರಿಗೆ ಹೋಗಿ ಹಿಂದಿರುಗುವ ವೇಳೆ ಮಳೆ ಬಂದ ಹಿನ್ನೆಲೆಯಲ್ಲಿ ಪತ್ನಿಯನ್ನು ಬಸ್ಸು ಹತ್ತಿಸಿ, ಸ್ಕೂಟಿಯಲ್ಲಿ ಬರುತ್ತೇನೆಂದು ಹೇಳಿದ ಪತಿಯ ಶವ ಕೊಟ್ಟಿಗೆ ಹಾರದ ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ಪತ್ತೆಯಾದ ಘಟನೆ ಎ.26 ರಂದು ನಡೆದಿದೆ.
ಚಿಕ್ಕಮಗಳೂರು ತಾಲ್ಲೂಕಿನ ತೇಗೂರಿನ ದಿಲೀಪ್ (40ವ) ಮೃತ ಪಟ್ಟ ವ್ಯಕ್ತಿಯಾಗಿದ್ದಾರೆ.
ಉಜಿರೆಯಲ್ಲಿ ವಾಸವಿದ್ದ ದಿಲೀಪ್ ರವರು ಧರ್ಮಸ್ಥಳದಲ್ಲಿ ಮುಡಿ ತೆಗೆಯುವ ಕಾರ್ಯ ಮಾಡುತ್ತಿದ್ದರು.
ಧಮ೯ಸ್ಥಳ ಗ್ರಾಮದ ಕೂಟದ ಕಲ್ಲು ಎಂಬಲ್ಲಿ ನೂತನ ಮನೆ ನಿರ್ಮಾಣ ಮಾಡಿದ್ದರು.
ಇದರ ಆಮಂತ್ರಣ ಪತ್ರಿಕೆಯನ್ನು ತಮ್ಮ ಸಂಬಂಧಿಕರಿಗೆ ನೀಡಲು ಪತ್ನಿಯೊಂದಿಗೆ ತೇಗೂರಿಗೆ ಬಂದಿದ್ದ ದಿಲೀಪ್ ಬುಧವಾರ ಸ್ಕೂಟಿಯಲ್ಲಿ ಉಜಿರೆಗೆ ಹೊರಟ್ಟಿದ್ದರು. ಕೊಟ್ಟಿಗೆಹಾರ ಸಮೀಪ ಬರುತ್ತಿದ್ದಂತೆ ಮಳೆ ಪ್ರಾರಂಭವಾಗಿದ್ದರಿಂದ ಪತ್ನಿಯನ್ನು ಬಸ್ಸಿಗೆ ಹತ್ತಿಸಿ ಉಜಿರೆಗೆ ಹೋಗಲು ಹೇಳಿ ತಾನು ಮಳೆ ನಿಂತ ಮೇಲೆ ಸ್ಕೂಟಿಯಲ್ಲಿ ಬರುವುದಾಗಿ ತಿಳಿಸಿದ್ದಾರೆ.
ಬುಧವಾರ ಸಂಜೆ ಹೆಬ್ಬರಿಗೆ ಸಮೀಪ ರಸ್ತೆ ಬದಿಯಲ್ಲಿ ದಿಲೀಪ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಜೊತೆಗಿದ್ದ ಮೊಬೈಲ್‌ನಿಂದಾಗಿ ಮೃತದೇಹದ ಗುರುತು ಪತ್ತೆಯಾಗಿದೆ.
ಈ ಬಗ್ಗೆ ಸ್ಥಳಕ್ಕೆ ಬಣಕಲ್ ಪೊಲೀಸ್ ಇಲಾಖೆ ಮಾಹಿತಿ ಬಂದು ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
ಚಾರ್ಮಾಡಿ ಘಾಟ್ ನ ಅಣ್ಣಪ್ಪಸ್ವಾಮಿ ದೇವಸ್ಥಾನದ ಸಮೀಪ ಸ್ಕೂಟಿ ಪತ್ತೆ:
ದಿಲೀಪ್ ಅವರ ಸ್ಕೂಟಿ ಚಾರ್ಮಾಡಿ ಘಾಟ್ ನ ಅಣ್ಣಪ್ಪಸ್ವಾಮಿ ದೇವಸ್ಥಾನದ ಸಮೀಪ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹಪ್ರವೇಶ ಮೇ 5 ರಂದು ಹಮ್ಮಿಕೊಂಡಿದ್ದು ಗೃಹಪ್ರವೇಶಕ್ಕೆ ಆಹ್ವಾನಿಸಲೆಂದು ಚಿಕ್ಕಮಗಳೂರಿಗೆ ಬಂದಿದ್ದವರು ಹಿಂದಿರುಗುವ ವೇಳೆ ಈ ಘಟನೆ ನಡೆದಿದ್ದು,. ಅಪಘಾತ ನಡೆದ ಜಾಗಕಿಂತ ಸ್ವಲ್ಪ ದೂರದಲ್ಲಿ ಶವ ಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.