ಚಾರ್ಮಾಡಿ ಘಾಟಿಯ 7ನೇ ತಿರುವಿನಲ್ಲಿ ವಾಹನ ಸವಾರರಲ್ಲಿ ಭೀತಿ ಹುಟ್ಟಿಸಿದ ಒಂಟಿ ಸಲಗ

Suddi Udaya

ಚಾರ್ಮಾಡಿ ಘಾಟಿಯ 7‌ನೇ ತಿರುವಿನಲ್ಲಿ ಗುರುವಾರ ಬೆಳಿಗ್ಗೆ 9ಗಂಟೆ ಹೊತ್ತಿಗೆ ಕಾಡಾನೆ ವಾಹನ ಸವಾರರಿಗೆ ಕಂಡು ಬಂದಿದೆ.ಸಲಗವು ರಸ್ತೆ ದಾಟುತ್ತಿದ್ದ ಕಾರಣ ಎರಡು ಕಡೆ ಸ್ವಲ್ಪ ಹೊತ್ತು ವಾಹನಗಳು ಸಾಲುಗಟ್ಟಿ ನಿಂತವು. ಈ ವೇಳೆ ವಾಹನ ಸವಾರರು ನಿರಂತರ ಹಾರ್ನ್ ಬಾರಿಸಿ ಕೆಲವರು ಫೋಟೋ ತೆಗೆಯಲು ಮುಂದಾದಾಗ ಆನೆ ಒಂದಿಷ್ಟು ಆಕ್ರೋಶಗೊಂಡ ಘಟನೆ ನಡೆದಿರುವ ಕುರಿತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಾಟಿ ರಸ್ತೆ ಬದಿ ಒಂಟಿ ಸಲಗ ಕಂಡುಬಂದಿರುವುದು ವಾಹನ ಸವಾರರಲ್ಲಿ ಭೀತಿ ಮೂಡಿಸಿದೆ.ಒಂಟಿ ಸಲಗ ಘಾಟಿ ಪರಿಸರದಲ್ಲಿ ಸಂಚರಿಸುತ್ತಿರುವ ಕುರಿತು ಚಾರ್ಮಾಡಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಗೆ ವಾಹನ ಸವಾರರು ಮಾಹಿತಿ ನೀಡಿದ್ದು ಇಲ್ಲಿನ ಸಿಬ್ಬಂದಿ ಘಾಟಿ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾಡಾನೆ ಕಂಡು ಬರದಿದ್ದರೂ ಅದು ಸಂಚರಿಸಿದ ಕುರುಹುಗಳು ಕಂಡುಬಂದಿವೆ.

ಎಚ್ಚರಿಕೆ.: ಚಾರ್ಮಾಡಿ ಘಾಟಿ ಪರಿಸರವು ಅರಣ್ಯ ಪ್ರದೇಶದಲ್ಲಿದ್ದು, ಇಲ್ಲಿ ಹಲವಾರು ವನ್ಯಜೀವಿಗಳು ವಾಸಿಸುತ್ತವೆ. ಸಾಮಾನ್ಯವಾಗಿ ರಾತ್ರಿ ವೇಳೆ ರಸ್ತೆಯ ಅಲ್ಲಲ್ಲಿ ಆಗಾಗ ಇವು ವಾಹನ ಸವಾರರಿಗೆ ಕಾಣಿಸಿಗುತ್ತವೆ. ಆದರೆ ಇದೀಗ ಹಗಲಿನ ವೇಳೆ ಕಾಡಾನೆ ರಸ್ತೆಯಲ್ಲಿ ಸಂಚರಿಸುವುದು ಕಂಡುಬಂದಿದೆ. ಈ ಕಾರಣದಿಂದ ವಾಹನ ಸವಾರರು ಹೆಚ್ಚಿನ ಮುಂಜಾಗ್ರತೆಯಿಂದ ಘಾಟಿ ರಸ್ತೆಯಲ್ಲಿ ಸಂಚರಿಸಬೇಕಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

Leave a Comment

error: Content is protected !!