ಕುಲಶೇಖರ : ಮಂಗಳೂರು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಡಳಿತದಲ್ಲಿರುವ ಇತಿಹಾಸ ಪ್ರಸಿದ್ಧ ಕುಲಾಲ ಸಮುದಾಯದ ಕುಲದೇವರಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನವು
ಶಿಲಾಮಯವಾಗಿ ರೂ. ಹತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಮೇ 14ರಿಂದ 25ವರೆಗೆ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಬಹಳ ವಿಜೃಂಭನೆಯಿಂದ ಜರಗಲಿದೆ ಎಂದು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮಯೂರ್ ಉಳ್ಳಾಲ್ ತಿಳಿಸಿದರು.
ಅವರು ಮೇ 11ರಂದು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಮೇ 14ರಿಂದ 25ವರೆಗೆ ಜರಗಲಿರುವ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ದೇವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ವಿಷ್ಣುಸ್ವರೂಪಿ ಶ್ರೀ ವೀರನಾರಾಯಣ ದೇವರ ಸಾನಿಧ್ಯವು ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿರಳವಾಗಿರುವ ದೇವಸ್ಥಾನ. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇದರ ಆಡಳಿತ ಸಮಿತಿ, ಸೇವಾ ಟ್ರಸ್ಟ್, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಜೊತೆಯಾಗಿ ಶ್ರೀ ದೇವಸ್ಥಾನದ ಜೀರ್ಣೋದ್ದಾರದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಇದಕ್ಕೆಲ್ಲ ಮಾಣಿಲ ಶ್ರೀಧಾಮದ ಯೋಗಿಕೌಸ್ತುಭ ಕರ್ಮಯೋಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಎಪ್ಪತ್ತನಾಲ್ಕು ವರುಷಗಳು ಹಿಂದೆ ಕ್ಷೇತ್ರವು ಜೀರ್ಣೋದ್ಧಾರಗೊಂಡಿತ್ತು. ಶ್ರೀ ಕ್ಷೇತ್ರದಲ್ಲಿ ಜಳಕದ ಕೆರೆ, ಉಂಬಳಿ ಬರುತ್ತಿದ್ದ ಕೃಷಿಭೂಮಿ ಹಾಗೂ ಕನಕಾಭರಣಗಳು ಇದ್ದವು ಎಂದು ಕಂಡುಬಂದಿರುತ್ತದೆ. ಕಾಲಘಟ್ಟದಲ್ಲಿ ಈ ದೇವಾಲಯವು ಶಿಥಿಲಾವಸ್ಥೆಗೆ ತಲುಪಿ ಕ್ಷೇತ್ರವು ಪಾಳು ಬಿದ್ದಿತ್ತು. ಈ ಪಾಳುಜದ್ದ ದೇವಾಲಯವು ಹಲವಾರು ವರ್ಷಗಳಿಂದ ಜೀರ್ಣಾವಸ್ಥೆಯಲ್ಲೇ ಉಳಿದುಕೊಂಡಿತ್ತು. ಇದನ್ನು ಮನಗಂಡು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ದೇವಸ್ಥಾನದ ಆಡಳತವನ್ನು ವಹಿಸಿಕೊಂಡು, ಪಾಳುಬಿದ್ದ ಕ್ಷೇತ್ರದ ಗರ್ಭಗುಡಿ ಮತ್ತು ಸುತ್ತುಪೌಳಿಯನ್ನು 1946-48ನೇ ಇಸವಿಯಲ್ಲಿ ನೂತನವಾಗಿ ನಿರ್ಮಿಸಿ, ವೈದಿಕ ವಿಧಿವಿಧಾನಗಳೊಂದಿಗೆ ಬ್ರಹ್ಮಕಲಶವನ್ನು ವಿಜೃಂಭನೆಯಿಂದ ನೆರವೇರಿಸಿದ್ದಾರೆ. ಇದರ ಜೊತೆಯಲ್ಲಿ ಶ್ರೀ ಕ್ಷೇತ್ರಕ್ಕೆ ಸಂಬಂಧಿಸಿದ ನಾಗಸಾನಿಧ್ಯ, ಪರಿವಾರ ದೈವಗಳ ಪ್ರತಿಷ್ಠಾಪನೆ, ಆರಾಧ್ಯ ಮೂರ್ತಿಗೆ ಚಿನ್ನಾಭರಣ, ಚಂದ್ರಮಂಡಲ ರಥ, ಎರಡು ಅಂತಸ್ತಿನ ಸುಸಜ್ಜಿತ ಸಮುದಾಯ ಭವನ, ಅರ್ಚಕರ ವಸತಿಗೃಹ ಮೊದಲಾದ ಆವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.
ರೂ.10 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ:
ಉದ್ದೇಶಿತ ಜೀರ್ಣೋದ್ಧಾರದ ಅಂಗವಾಗಿ ನೂತನ ಶಿಲಾಮಯ ಗರ್ಭಗುಡಿ, ಮುಖಮಂಟಪ, ಸುತ್ತುಪೌಳಿ, ನಮಸ್ಕಾರ ಮಂಟಪ, ಜ್ಞಾನ ಮಂದಿರ, ರಾಜಗೋಪುರ ಹಾಗೂ ವಸಂತ ಮಂಟಪದ ನಿರ್ಮಾಣ ವೆಚ್ಚವು ಸುಮಾರು ರೂಪಾಯಿ 10 ಕೋಟಿ ತಗಲಬಹುದೆಂದು ಅಂದಾಜಸಲಾಗಿದೆ. ನೂತನ ಶಿಲಾಮಯ ಗರ್ಭಗುಡಿ, ಸುತ್ತುಪೌಳಿ ಹಾಗೂ ರಾಜಗೋಪುರ, ನಮಸ್ಕಾರ ಮಂಟಪ, ವಸಂತ ಮಂಟಪ, ನಾಗದೇವರ ಸಾನಿಧ್ಯ, ಪಲವಾರ ಶಕ್ತಿಗಳು, ರಂಗಮಂಟಪ ಮತ್ತು ಇನ್ನಿತ್ತರ ಕಾಮಗಾರಿಗಳು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಬೃಹತ್ ಹೊರೆಕಾಣಿಕೆ ಮೆರವಣಿಗೆ:
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಬಿ. ಪ್ರೇಮಾನಂದ ಕುಲಾಲ್ ಮಾಹಿತಿ ನೀಡಿ, ಮೇ 14ರಂದು ಸಂಜೆ 3.3೦ರಿಂದ ಕದ್ರಿ ದೇವಸ್ಥಾನದಿಂದ ಮಲ್ಲಿಕಟ್ಟೆ-ನಂತೂರು ಜಂಕ್ಷನ್ ಮೂಲಕ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆಯ ಬೃಹತ್ ಭವ್ಯ ಮೆರವಣಿಗೆ ಜರಗಲಿದೆ. ಅವಿಭಜಿತ ಜಿಲ್ಲೆಗಳಿಂದ ಮಾತ್ರವಲ್ಲದೆ ರಾಜ್ಯದ ವಿವಿಧೆಡೆಗಳಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಆಕರ್ಷಕ ಟ್ಯಾಬ್ಲೋಗಳು, ಚೆಂಡೆ ವಾದಕಗಳು, ಅತ್ಯಾಕರ್ಷಕ ಬರ್ಕೆ ಹುಲಿವೇಷ, ಕುಣಿತ ಭಜನೆ, ಗೊಂಬೆಕುಣಿತ, ತಾಲೀಮು ಮೆರವಣಿಗೆಗೆ ಮೆರುಗು ನೀಡಲಿದೆ. ಬ್ರಹ್ಮಕಲಶೋತ್ಸವ ಸಮಿತಿಯ ಮಾರ್ಗದರ್ಶಕರು ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನ ಮತ್ತು ಪಾವನಸಾನಿಧ್ಯದಲ್ಲಿ ಹೊರೆಕಾಣಕೆ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಹಲವು ಅತಿಥಿ ಗಣ್ಯರು, ಅವಿಭಜಿತ ಜಿಲ್ಲೆಯ ಕುಲಾಲ ಬಾಂಧವರು, ನಾಡಿನ ಸಮಸ್ತ ಭಕ್ತರು ಮಾತ್ರವಲ್ಲದೆ ಮುಂಬೈ, ಪೂನಾ, ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಭಕ್ತಾಧಿಗಳು ಮೆರವಣಿಗೆಯಲ್ಲಿ ಪಾಲು ಪಡೆಯಲಿದ್ದಾರೆ ಎಂದವರು ತಿಳಿಸಿದರು.
ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಹೊರೆಕಾಣಿಕೆ ಸಮರ್ಪಿಸಲಿದ್ದಾರೆ. ಹೀಗಾಗಿ ವಿವಿಧ ಭಾಗಗಳಿಂದ ಬರುವ ಹೊರೆಕಾಣಿಕೆಯನ್ನು ಬಂಟ್ವಾಳ ಕುಲಾಲ ಸಂಘ, ಸುರತ್ಕಲ್ ಕುಲಾಲ ಸಂಘ, ಕೊಲ್ಯ ಕುಲಾಲ ಸಂಘಗಳಲ್ಲಿ ಒಟ್ಟುಗೂಡಿಸಿ ಅಲ್ಲಿಂದ ಏಕಕಾಲದಲ್ಲಿ ನಂತೂರು ಜಂಕ್ಷನ್ ಮೂಲಕ ಶ್ರೀ ಕ್ಷೇತ್ರಕ್ಕೆ ತಲುಪುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಪುನರ್ ಪ್ರತಿಷ್ಠೆ :
ಮೇ 21ರಂದು ಪೂ.ಗಂ. 9-೦೦ರಿಂದ 9-3೦ರ ಸಮಯ ನಡೆಯುವ ಮಿಥುನಲಗ್ನ ಸುಮುಹೂರ್ತದಲ್ಲಿ ಶ್ರೀ ವೀರನಾರಾಯಣ ದೇವರ ಪುನರ್ ಪ್ರತಿಷ್ಠೆ ಜರಗಲಿದೆ
ಬ್ರಹ್ಮಕಲಶಾಭಿಷೇಕ :
ಮೇ 24ರಂದು ಪೂ.ಗಂ. 8.05ರಿಂದ 8.20ರ ತನಕ ನಡೆಯುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಕ್ಷೇತ್ರದ ತಂತ್ರಿಗಳಾದ ವೇ|ಮೂ| ಬ್ರಹ್ಮಶ್ರೀ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದೆ
ಧಾರ್ಮಿಕಸಭೆ, ಸಾಂಸ್ಕೃತಿಕ ಕಾರ್ಯಕ್ರಮ:
*ವಿವಿಧ ವೈದಿಕ, ಧಾರ್ಮಿಕ ಕ್ರಮಗಳೊಂದಿಗೆ ಪ್ರತಿದಿನ ಸಂಜೆ ಧಾರ್ಮಿಸಭೆ ನಡೆಯಲಿದೆ. ಧಾರ್ಮಿಕ ಸಭೆಯ ಬಳಿಕ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ*
ಪತ್ರಿಕಾಗೋಷ್ಠಿ ಯಲ್ಲಿ ಪುರುಷೋತ್ತಮ ಕುಲಾಲ್ ಆಡಳಿತ ಮೊಕ್ತೇಸರರು ಶ್ರೀ ವೀರನಾರಾಯಣ ದೇವಸ್ಥಾನ ಮತ್ತು ಗೌರವ ಸಲಹೆಗಾರರು ಬ್ರಹ್ಮಕಲಶೋತ್ಸವ ಸಮಿತಿ, ದಾಮೋದರ ಎ. ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಮತ್ತು ಗೌರವಾಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ, ಕೆ. ಸುಂದರ ಕುಲಾಲ್ ಅಧ್ಯಕ್ಷರು ಸೇವಾ ಸಮಿತಿ ಮತ್ತು ಸಂಚಾಲಕರು ಬ್ರಹ್ಮಕಲಶೋತ್ಸವ ಸಮಿತಿ, ಗಿರಿಧರ ಜೆ. ಮೂಲ್ಯ ಪ್ರಧಾನ ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ, ಸುರೇಶ್ ಕುಲಾಲ್ ಕಾರ್ಯಾಧ್ಯಕ್ಷರು ಸ್ವಾಗತ ಸಮಿತಿ, ಎಂ.ಪಿ. ಬಂಗೇರ ಕಾರ್ಯದರ್ಶಿ ಜೀರ್ಣೋದ್ಧಾರ ಸಮಿತಿ, ಜಲಜಾಕ್ಷಿ ಪಿ. ಅಧ್ಯಕ್ಷರು ಮಹಿಳಾ ವಿಭಾಗ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಮತ್ತು ಸಂಚಾಲಕರು, ಬ್ರಹ್ಮಕಲಶೋತ್ಸವ ಪೂರ್ಣಕುಂಭ ಸ್ವಾಗತ ಸಮಿತಿ ಉಪಸ್ಥಿತರಿದ್ದರು.