ಬೆಳ್ತಂಗಡಿ: ಜೈನರಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಕಾಂಗ್ರೇಸ್ ಪಕ್ಷದಿಂದ ಆಯ್ಕೆಯಾಗಿರುವ ಹಿರಿಯೂರಿನ ಶಾಸಕ ಡಿ. ಸುಧಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಬೇಕೆಂದು ಜೈನ ಸಮಾಜ ಆಗ್ರಹಿಸುತ್ತದೆ ಎಂದು ನಿರಂಜನ್ ಜೈನ್ ಕುದ್ಯಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ನಡೆದು ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಬಡ ಜನತೆಯ , ರಾಜ್ಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಮಾದರಿ ಸರಕಾರ ತಮ್ಮಿಂದ ಹೊರಹೊಮ್ಮಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೇಸ್ ಪಕ್ಷ ಜಾತ್ಯಾತೀತ ನಿಲುವಿನಲ್ಲಿ ನಂಬಿಕೆ ಇದೆ ಎಂದು ಹೇಳುತ್ತಿದೆ. ಎಲ್ಲಾ ಧರ್ಮ, ಜಾತಿ, ಮತ, ಪಂಗಡಗಳನ್ನು ಒಂದೇ ರೀತಿಯಲ್ಲಿ ಕಾಣುತ್ತೇವೆ ಎಂದು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದೆ. ಅದರಂತೆ ನಡೆಯುವುದು ಕಾಂಗ್ರೇಸ್ ನ ನೈತಿಕ ಹೊಣೆಯಾಗಿದೆ.
ಜೈನರು ರಾಜಕೀಯದ ದೃಷ್ಟಿಯಿಂದ ಓಟು ಬ್ಯಾಂಕ್ ರಾಜಕಾರಣದಲ್ಲಿ ಸಂಖ್ಯಾ ದೃಷ್ಟಿಯಿಂದ ರಾಜಕೀಯ ಪಕ್ಷಗಳಿಗೆ ನಗಣ್ಯರಾಗಿದ್ದಾರೆ. ಆದರೆ ಜೈನ ಧರ್ಮೀಯರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಕರೆದುಕೊಂಡು ಹೋಗಬೇಕಾದದ್ದು ಸರಕಾರದ ಕರ್ತವ್ಯವಾಗಿದೆ. ಇಲ್ಲದೇ ಹೋದಲ್ಲಿ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿರುವ ಜೈನರಲ್ಲಿ ಅಭದ್ರತೆಯ ಭಾವನೆ ಬಲವಾಗುತ್ತದೆ.
ಆದರೆ ಜೈನರಲ್ಲಿ 50 % ಕ್ಕಿಂತಲೂ ಅಧಿಕ ಕಡುಬಡವರು ಇದ್ದಾರೆ. ಜೈನರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ, ಸರಕಾರದಿಂದ ಸವಲತ್ತುಗಳೂ ಕೂಡ ಸಿಗುತ್ತಿಲ್ಲ.
ಜೈನರಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಕಾಂಗ್ರೇಸ್ ಪಕ್ಷದಿಂದ ಆಯ್ಕೆಯಾಗಿರುವ ಹಿರಿಯೂರಿನ ಶಾಸಕ ಡಿ. ಸುಧಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಬೇಕೆಂದು ಜೈನ ಸಮಾಜ ಆಗ್ರಹಿಸುತ್ತೇವೆ. ಈ ಮೂಲಕ ಜೈನರಲ್ಲಿ ಇರಬಹುದಾದ ಅಭದ್ರತೆಯ ಭಾವ ಹೊರಟುಹೋಗುತ್ತದೆ. ಕಾಂಗ್ರೇಸ್ ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತದೆ ಎಂಬ ನಂಬಿಕೆ ನಮಗಿದೆ.
ಜೈನ ಸಮಾಜದ ಮುಖಂಡರು, ಸಂಘಟನೆಗಳು ಈ ನಿಟ್ಟಿನಲ್ಲಿ ಜೈನ ಧರ್ಮೀಯರೊಬ್ಬರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಸಂಘಟಿತರಾಗಿ ಪ್ರಯತ್ನವನ್ನು, ಹೋರಾಟವನ್ನು ಮಾಡುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಕೂಡಲೇ ಜೈನ ಸಮಾಜ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.