ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿ ಮಂಗಳೂರು ನಗರ ವಲಯ ಸಮಿತಿ ನೇತೃತ್ವದಲ್ಲಿ ಯುವವಾಹಿನಿ ಮಂಗಳೂರು ಘಟಕ ಹಾಗೂ ಕಂಕನಾಡಿ ಘಟಕ ಸಹಕಾರದಲ್ಲಿ ಗೆಜ್ಜೆಗಿರಿ ಮೇಳದವರಿಂದ ಮಂಗಳೂರಿನ ಪುರಭವನದಲ್ಲಿ ಜರಗಿದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗವು ಪ್ರಾರಂಭಗೊಂಡ ಈ ವರ್ಷದಲ್ಲಿಯೇ ದಾಖಲೆಯ 150ನೇ ಪ್ರದರ್ಶನ ಗೊಂಡ ಬಗ್ಗೆ ಸಂಭ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮೇಳದ ಸಂಚಾಲಕರಾಗಿ ದಕ್ಷತೆಯಿಂದ ಕಾರ್ಯಮೆರೆದ ನವೀನ್ ಸುವರ್ಣ ಸಜಿಪ, ನವೀನ್ ಅಮೀನ್ ಶಂಕರಪುರ ಮತ್ತು ಯಕ್ಷಪ್ರಸಂಗ ಕತೃ ನಿತಿನ್ ಪೂಜಾರಿ ತೆಂಕಕಾರಂದೂರು ಹಾಗೂ ಮೇಳದ ಹಿಮ್ಮೇಳ, ಮುಮ್ಮೇಳದ ಎಲ್ಲಾ ಕಲಾವಿದರನ್ನು ಸನ್ಮಾನಿಸಲಾಯಿತು. ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆಯ 150 ರ ಪ್ರದರ್ಶನವನ್ನು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಎಂ. ಪಿ. ದಿನೇಶ್, ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ, ಮಂಗಳೂರು ನಗರ ಸಮಿತಿಯ ಪ್ರಧಾನ ಸಂಚಾಲಕರಾದ ಹರೀಶ್ ಕೆ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ರಾಜೇಶ್, ಮಂಗಳೂರು ಘಟಕದ ಅಧ್ಯಕ್ಷ ಗಣೇಶ್ ಸುವರ್ಣ, ಕಂಕನಾಡಿ ಘಟಕದ ಅಧ್ಯಕ್ಷ ಪ್ರಥ್ವಿರಾಜ್ ಮುಂತಾದವರು ಉಪಸ್ಥಿತರಿದ್ದರು.