April 2, 2025
ಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಜೇನು ಕುಟುಂಬಕ್ಕಾಗಿ ಕಾಡಿಗೆ ತೆರಳಿದ್ದ ಅಣ್ಣ ಸಂತೋಷ್‌ಗೆ ಕಚ್ಚಿದ ಹಾವು: ಬಾಯಿಯಿಂದ ವಿಷ ಹೀರಿ ಅಣ್ಣನ ಜೀವ ಉಳಿಸಿದ ತಮ್ಮ ಗಣೇಶ್

ಕೊಕ್ಕಡ: ಇಂದು ಸಮಾಜದಲ್ಲಿ ಆಸ್ತಿ ಸೇರಿದಂತೆ ಬೇರೆ, ಬೇರೆ ವಿಷಯಗಳಲ್ಲಿ ಅಣ್ಣ-ತಮ್ಮಂದಿರ ನಡುವೆ ಜಗಳವಾಗಿ ಕುಟುಂಬಗಳು ಬೀದಿಗೆ ಬರುವ ಸುದ್ದಿಗಳನ್ನು ಕಾಣುತ್ತೇವೆ. ಆದರೆ ತನ್ನ ಅಣ್ಣನಿಗೆ ಕಾಡಿನಲ್ಲಿ ವಿಷದ ಹಾವು ಕಚ್ಚಿ, ತೀವ್ರ ಅಸ್ವಸ್ಥ್ಯಗೊಂಡದ್ದನ್ನು ಕಂಡ, ತಮ್ಮ ತನ್ನ ಜೀವದ ಹಂಗು ತೊರೆದು ಬಾಯಿಯಿಂದ ವಿಷವನ್ನು ಹೀರಿ, ಕಾಡಿನಿಂದ ಅಣ್ಣನ್ನು ಹೊತ್ತುಕೊಂಡು ಬಂದು, ಚಿಕಿತ್ಸೆ ಕೊಡಿಸಿ ಬದುಕಿಸಿದ ವಿಶೇಷ ಪ್ರಕರಣ ಕೊಕ್ಕಡ ಗ್ರಾಮದ ಮುಂಡೂರುಪಲ್ಕೆಯಲ್ಲಿ ನಡೆದಿದೆ.
ಕೊಕ್ಕಡ ಗ್ರಾಮದ ಮುಂಡೂರುಪಲ್ಕೆ ಕುರ್ಲೆ ನಿವಾಸಿ ತಿಮ್ಮಯ್ಯ ಮಲೆಕುಡಿಯ ಮತ್ತು ಶ್ರೀಮತಿ ಸುಧಾ ಇವರ ಪುತ್ರ ಗಣೇಶ್ ಕೆ. ಅಣ್ಣನ್ನು ಬದುಕಿಸಿ ಮಾನವೀಯತೆ ಮರೆದವರರಾಗಿದ್ದಾರೆ. ಇವರ ಅಣ್ಣ ಸಂತೋಷ್ (25ವ) ಹಾವು ಕಚ್ಚಿ ವಿಷವೇರಿದರೂ, ತಮ್ಮನ ಸಕಾಲಿಕ ಪ್ರಥಮ ಚಿಕಿತ್ಸೆಯಿಂದ ಬದುಕುಳಿದಿದ್ದು, ಈಗ ನಾಟಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.


ಘಟನೆಯ ಹಿನ್ನಲೆ: ಮುಂಡೂರುಪಲ್ಕೆ ನಿವಾಸಿ ಗಣೇಶ್ ಕೆ. ಅವರು ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಸಿಸಿ ಕ್ಯಾಡೆಟ್‌ನ ವಿದ್ಯಾರ್ಥಿಯಾಗಿ, ಪದವಿ ಪಡೆದ ಬಳಿಕ ಉಜಿರೆ ರುಡ್‌ಸೆಟ್‌ನಲ್ಲಿ ಜೇನುಕೃಷಿ ತರಬೇತಿಯನ್ನು ಪಡೆದು ಜೇನುಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ಜೇನು ಪೆಟ್ಟಿಗೆಗೆ ಸ್ಥಳೀಯ ಕಾಡಿನಲ್ಲಿ ಜೇನು ಕಟುಂಬವನ್ನು ಹುಡುಕಿ ಪೆಟ್ಟಿಗೆಯಲ್ಲಿ ಕೂರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೇ 30ರಂದು ಅಣ್ಣ ಸಂತೋಷ್ ಹಾಗೂ ತಮ್ಮ ಗಣೇಶ್ ಕೆ. ಅವರು ತಮ್ಮ ಮನೆಯ ಸಮೀಪದ ಕಾಡಿಗೆ ಜೇನು ಕುಟುಂಬ ಹುಡುಕಾಟಕ್ಕೆ ತೆರಳಿದ್ದರು. ಕಾಡಿನಲ್ಲಿ ಸುಮಾರು ಎರಡೂವರೆ ಕಿ.ಮೀ ದೂರ ಸಾಗಿದ್ದರು. ದಟ್ಟವಾದ ಕಾಡಿನಲ್ಲಿ ಪೊದೆ, ಗಿಡಗಳನ್ನು ಸರಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕಾಡಿನ ಮಧ್ಯೆ ಅಣ್ಣ ಸಂತೋಷ್ ಅವರಿಗೆ ಗಿಡವೊಂದರಲ್ಲಿದ್ದ ವಿಷಪೂರಿತ ಮಲಬಾರ್ ಗುಳಿ ಮಂಡಲ(ಮಲಬಾರ್ ಪಿಟ್ ವೈಪರ್) ಹಾವು ಕೈ ಬೆರಳಿಗೆ ಕಚ್ಚಿತ್ತು.
ಸ್ವಲ್ಪ ಸಮಯದಲ್ಲೇ ಅವರು ವಿಷವೇರಿ ತೀವ್ರ ಅಸ್ವಸ್ಥಗೊಂಡರು. ತಮ್ಮ ಗಣೇಶ್ ಅವರಿಗೆ ಈ ವಿಷಯ ಗೊತ್ತಾಗುತ್ತಲೇ, ತಕ್ಷಣ ಹಾವು ಕಚ್ಚಿದ ಜಾಗದ ಮೇಲೆ ಕೈಗೆ ಬಟ್ಟೆ ಕಟ್ಟಿದರು. ಹಾವು ಕಚ್ಚಿ ಗಾಯಗೊಂಡ ಅಣ್ಣನ ಬೆರಳಿನ ಜಾಗವನ್ನು ಬಾಯಿಯಿಂದ ಹೀರಿ ಹಾವಿನ ವಿಷವನ್ನು ಮೂರು, ನಾಲ್ಕು ಬಾರಿ ತೆಗೆದು ಪ್ರಥಮ ಚಿಕಿತ್ಸೆ ನೀಡಿದರು. ನಿತ್ರಾಣಗೊಂಡು ನಡೆದು ಬರಲು ಸಾಧ್ಯವಾಗದೆ ಕುಸಿದು ಬಿದ್ದಿದ್ದ ಅಣ್ಣನನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸುಮಾರು ಎರಡೂವರೆ ಕಿ.ಮೀ ಕಾಡಿನಲ್ಲಿ ನಡೆದು ಬಂದ ಗಣೇಶ್ ಕೆ. ಅವರು ತಮ್ಮ ಮನೆಯವರಿಗೆ ವಿಷಯ ತಿಳಿಸಿ, ನಂತರ ನಾಟಿವೈದ್ಯರಿಂದ ಚಿಕಿತ್ಸೆ ಕೊಡಿಸಿದರು. ಸಂತೋಷ್ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಗಣೇಶ್ ಅವರ ಸಕಾಲಿಕ ಪ್ರಥಮ ಚಿಕಿತ್ಸೆಯಿಂದ ಅಣ್ಣ ಸಂತೋಷ್ ಅವರ ಜೀವ ಉಳಿದಿದೆ, ಗಣೇಶ್ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಇನ್ನೋರ್ವ ಸಹೋದರ ವಿಠಲ ಕುರ್ಲೆ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಲಿಗೆ ನೀಲಿ ಬಣ್ಣಕ್ಕೆ ತಿರುಗಿತ್ತು:
ನಾನು ಜೇನು ಸಾಕಾಣೆ ಮಾಡುತ್ತಿದ್ದು, ಜೇನು ಕುಟುಂಬಕ್ಕಾಗಿ ಅಣ್ಣನ ಜೊತೆ ಕಾಡಿಗೆ ಹೋಗಿದ್ದೆವು. ಅಣ್ಣನಿಗೆ ಹಾವು ಕಚ್ಚಿದ ವಿಷಯ ತಿಳಿದ ಕೂಡಲೇ, ಹಾವು ಕಚ್ಚಿದ ಜಾಗದ ಮೇಲ್ಗಡೆ ಕೈಗೆ ಬಟ್ಟೆ ಕಟ್ಟಿ, ಬಾಯಿಯಿಂದ ವಿಷವನ್ನು ಹೀರಿ ಹೊರಗೆ ತೆಗೆದಿದ್ದೆ. ನಾಲ್ಕೈದು ಸಲ ಹೀಗೆ ಮಾಡಿದ್ದೆ. ವಿಷ ತೆಗೆದ ಬಳಿಕ ನನ್ನ ನಾಲಿಗೆ ನೀಲಿ ಬಣ್ಣಕ್ಕೆ ತಿರುಗಿತ್ತು. ಬಾರಿ ಜಾಗೃತೆಯಿಂದ ವಿಷ ಹೀರಿದ್ದರಿಂದ ಅಪಾಯವಾಗಿಲ್ಲ, ನಂತರ ಬಾಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿದೆ.

  • ಗಣೇಶ್ ಕೆ. ಮುಂಡೂರಪಲ್ಕೆ

Related posts

ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ: ನಿನ್ನೆ ನಡೆದ ಸಭೆಯಲ್ಲಿ ರಾಜೀನಾಮೆ ನೀಡಲು ನಿರ್ಣಯಿಸಲಾಗಿದೆಯೇ ಹೊರತು ನಾವು ರಾಜೀನಾಮೆ ನೀಡಿಲ್ಲ: ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಹೇಳಿಕೆ

Suddi Udaya

ಬೆಳಾಲು: ನೇತ್ರಾವತಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಪ್ರಸಾದ್ ಮೃತದೇಹ ಪತ್ತೆ

Suddi Udaya

ಮಿಜಾರುಗುತ್ತು ಆನಂದ ಆಳ್ವ ರವರ ನಿಧನಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಕುಂಟಾಲಪಳಿಕೆ ಸಮನ್ವಿ ಕಿಶೋರಿ ಸಂಘದ ಉದ್ಘಾಟನೆ

Suddi Udaya

ಕುವೆಟ್ಟು: ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ: ಲಾರಿ ಚಾಲಕ ಹಾಗೂ ಎರಡು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ 500 ಸೇವಾ ಚಟುವಟಿಕೆ ಗುರಿ : ನ.4 ರಂದು ರಾಜ್ಯಪಾಲರ ಭೇಟಿ ದಿನ ನಾಲ್ಕು ಅರ್ಹ ಕುಟುಂಬಕ್ಕೆ ಮನೆ ಹಸ್ತಾಂತರ

Suddi Udaya
error: Content is protected !!