ಬೆಳ್ತಂಗಡಿ: ಎಂಡೋಸಲ್ಫಾನ್ ಮಹಾಮಾರಿಯಿಂದಾಗಿ ಚಿಕ್ಕಿಂದಿನಿಂದಲೇ ದೃಷ್ಟಿ ಕಳೆದುಕೊಂಡರೂ ತನ್ನ ಒಳದೃಷ್ಟಿಯಿಂದಲೇ ಇಡೀ ಊರಿನ ಜನರ ಪರವಾಗಿ ಎಂಡೋಸಲ್ಫಾನ್ ವಿರುದ್ಧ ಹೋರಾಟಗಾರಾದ ಕೊಕ್ಕಡ ನಿವಾಸಿ ಶ್ರೀಧರ ಗೌಡ ಕೆಂಗುಡೇಲು ರವರು ವಿಜಯಕರ್ನಾಟಕ ದೈನಿಕ ನೀಡುವ “ವಿಕ ಹಿರೋಸ್” ಎಂಬ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದ್ದಾರೆ.
ಕೊಕ್ಕಡ ಎಂಬ ಪುಟ್ಟ ಊರಿನಲ್ಲಿ ಎಂಡೋ ಸಲ್ಫಾನ್ ಬಾಧೆಯಿಂದ 300ಕ್ಕೂ ಅಧಿಕ ಮಂದಿ ನರಕಯಾತನೆ ಅನುಭವಿಸುತ್ತಿದ್ದು, ಅವರಿಗಾಗಿ ಸ್ವತಃ ಎಂಡೋ ಸಂತ್ರಸ್ತನಾಗಿ ಹೋರಾಟಕ್ಕೆ ಧುಮುಕಿದರು. ಇವರು ಮೊದಲು ಹೋರಾಟಕ್ಕೆ ಇಳಿದಿದ್ದು ಉಪ್ಪಾರವಳಿಕೆ ಹಿರಿಯ ಪ್ರಾಥಮಿಕ ಶಾಲೆಗಾಗಿ, ಆ ಬಳಿಕ ಸೇತುವೆ, ವಿದ್ಯುತ್, ಆರೋಗ್ಯ ಸೌಲಭ್ಯ, ಬಸ್ ಸೇರಿದಂತೆ, ಅನೇಕ ಬೇಡಿಕೆಗಳಿಗೆ ಸಂಘಟಿತರಾಗಿ ಹೋರಾಟಕ್ಕೆ ಧುಮುಕಿದರು 1980ರಿಂದ 2000ದ ವರೆಗೆ ಸರಕಾರಿ ಗೇರುತೋಪುಗಳಿಗೆ ಸಿಂಪಡಿಸಿದ ಎಂಡೋಸಲ್ಫಾನ್ ನಿಂದಾಗಿ ಕೊಕ್ಕಡ ಹಾಗೂ ಅದರ ಪಕ್ಕದ ನಿಡ್ಲೆ ಹಾಗೂ ಪಟ್ರಮೆ ಗ್ರಾಮದ ಜನರ ಜೀವನ ನರಕ ಸದೃಶವಾಗಿತ್ತು. ಆರಂಭದಲ್ಲಿ ಯಾರೂ ಈ ಬಗ್ಗೆ ಗಂಭೀರವಾಗಿ ಯೋಚಿಸಿದೆ ಇದ್ದಾಗ ಶ್ರೀಧರ ಗೌಡ ಮುಂಚೂಣಿಯಲ್ಲಿ ನಿಂತು ಹೋರಾಟಕ್ಕೆ ಇಳಿದರು.
ಎಂಡೋ ಸಂತ್ರಸ್ತರಿಗೆ ಮಾಸಾಶನ, ಆರೋಗ್ಯ ಕಾರ್ಡ್, ಪಾಲನಾ ಕೇಂದ್ರ, ಉಚಿತ ಬಸ್ ಪಾಸ್, ಶಿಕ್ಷಣ ಸೇರಿದಂತೆ ವಿವಿಧ ಹೋರಾಟ ನಡೆಸಿ ಭಾಗಶಃ ಯಶಸ್ಸು ಕಂಡರು. ‘ಶ್ರೀಧರ ಗೌಡರ ಹೋರಾಟ ಕೇವಲ ಕೊಕ್ಕಡ ಹೋಬಳಿಗೆ ಮಾ ವಾಗಿರಲಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆ ಸೇರಿದ ಜಿಲ್ಲೆಯ ಎಂಟೂವರೆ ಸಾವಿರ ಎಂಡೋಸಲ್ಫಾನ್ ಸಂತ್ರಸ್ತರಿಗೆ ನ್ಯಾಯ ಕೊಡುವಲ್ಲಿ ಸಫಲರಾಗಿದ್ದಾರೆ.
ಇವರ ಈ ವಿಶೇಷ ಸೇವೆಯನ್ನು ಗುರುತಿಸಿ ಕರ್ನಾಟಕದ ಹೆಮ್ಮೆಯ ದಿನಪತ್ರಿಕೆ ವಿಜಯಕರ್ನಾಟಕ ದೈನಿಕವು “ವಿಕ ಹಿರೋಸ್” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.