ಮೈಸೂರಿನ ಎಸ್.ಡಿ.ಎಂ.ಐ.ಎಂ.ಡಿ.ಯ ಪಿ.ಜಿ.ಡಿ.ಎಂ. ಕೋರ್ಸಿಗೆ ಎರಡನೆ ಬಾರಿ ಇ.ಎಫ್.ಎಂ.ಡಿ. ಮಾನ್ಯತೆ ನವೀಕರಣ: ಡಾ| ಡಿ. ಹೆಗ್ಗಡೆಯವರಿಂದ ಜಾಗತಿಕ ಮಾನ್ಯತೆ ನವೀಕರಣ ಪ್ರಮಾಣಪತ್ರ ಸ್ವೀಕಾರ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ಮೈಸೂರಿನಲ್ಲಿ ನಡೆಸಲ್ಪಡುತ್ತಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಮೆನೇಜ್‌ಮೆಂಟ್ ಡೆವೆಲಪ್‌ಮೆಂಟ್ (ಎಸ್.ಡಿ.ಎಂ.ಐ.ಎಂ.ಡಿ.) ಸಂಸ್ಥೆಯ ಪಿ.ಜಿ.ಡಿ.ಎಂ. ಕೋರ್ಸಿಗೆ ಎರಡನೆ ಬಾರಿ ಯುರೋಪಿಯನ್ ಫೆಡರೇಶನ್ ಆಫ್ ಮೆನೇಜ್‌ಮೆಂಟ್ ಡೆವೆಲಪ್‌ಮೆಂಟ್ (ಇ.ಎಫ್.ಎಂ.ಡಿ.) ಸಂಸ್ಥೆಯು ಜಾಗತಿಕ ಮಾನ್ಯತೆ ನೀಡಿ ಗೌರವಿಸಿದೆ.


ಫ್ರಾನ್ಸ್ ದೇಶದ ಲಿಯೋನ್‌ನಲ್ಲಿ ಜೂ.12 ರಂದು ನಡೆದ ವಿಶೇಷ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಜಾಗತಿಕ ಮಾನ್ಯತೆ ನವೀಕರಣ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ಎಸ್.ಡಿ.ಎಂ. ಐ.ಎಂ.ಡಿ. ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್ ಉಪಸ್ಥಿತರಿದ್ದರು.
ಇ.ಎಫ್.ಎಂ.ಡಿ. ಅಧ್ಯಕ್ಷರಾದ ಎರಿಕ್‌ಕೋರ್ನ್‌ವೆಲ್, ನಿರ್ದೇಶಕರುಗಳಾದ ಆಲ್ಫೋನ್ಸ್ ಸಾಕ್ವೆಟ್ ಮತ್ತು ಬರ್ಬರಾ ಸ್ಪೋರ್ನ್ ಹಾಗೂ ಮಾರ್ಗದರ್ಶಕ ಅಧಿಕಾರಿ ನಿಶಿತ್ ಜೈನ್ ಮಾನ್ಯತೆ ನವೀಕರಣ ಪತ್ರ ನೀಡಿ ಹೆಗ್ಗಡೆಯವರನ್ನು ಗೌರವಿಸಿದರು.
ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ಆಡಳಿತ ನಿರ್ವಹಣೆಯ ಉತ್ಕೃಷ್ಟತೆಯನ್ನು ಮನ್ನಿಸಿ ಸಂಸ್ಥೆಗೆ ಎರಡನೆ ಬಾರಿ ಜಾಗತಿಕ ಮಾನ್ಯತೆ ನವೀಕರಣ ಪ್ರಮಾಣಪತ್ರ ನೀಡಲಾಗಿದೆ.
ಭಾರತದಲ್ಲೆ ಪ್ರಥಮ ಬಾರಿಗೆ2017ರಲ್ಲಿ ಸಂಸ್ಥೆಗೆ ಜಾಗತಿಕ ಮಾನ್ಯತೆ ದೊರಕಿದ್ದು ಬಳಿಕ 2020 ಮತ್ತು ಇದೀಗ ಎರಡನೆ ಬಾರಿ 2023ರಲ್ಲಿ ಜಾಗತಿಕ ಮಾನ್ಯತೆ ನವೀಕರಣ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ.
ಇದರಿಂದಾಗಿ ಎಸ್.ಡಿ.ಎಂ.ಐ.ಎಂ.ಡಿ. ಜಗತ್ತಿನ ಹದಿನೇಳು ಪ್ರತಿಷ್ಠಿತ ಮೆನೇಜ್‌ಮೆಂಟ್ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಅಧ್ಯಯನಕ್ಕಾಗಿ ಸಂಪರ್ಕ ಮತ್ತು ಮಾನ್ಯತೆ ಹೊಂದಿದ್ದು ಅವುಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ವಿಶೇಷ ಅಧ್ಯಯನ ಮತ್ತು ಸಂಶೋಧನೆ ನಡೆಸಲು ಮುಕ್ತ ಅವಕಾಶವಿದೆ.
ಪ್ರಸ್ತುತ ಎಸ್.ಡಿ.ಎಂ.ಐ.ಎಂ.ಡಿ.ಯ ೩೨ ವಿದ್ಯಾರ್ಥಿಗಳು ಅಮೇರಿಕಾ, ಮಧ್ಯಪೂರ್ವ ಹಾಗೂ ಯುರೋಪಿಯನ್ ದೇಶಗಳ ವಿಶ್ವವಿದ್ಯಾಲಯಗಳಲಲ್ಲಿ ವಿಶೇಷ ಅಧ್ಯಯನ ಮತ್ತು ಸಂಶೋಧನಾ ಕಾರ್ಯದಲ್ಲಿ ನಿರತರಾಗಿದ್ದಾರೆ.

Leave a Comment

error: Content is protected !!