ಉಜಿರೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಉಜಿರೆ- ಬೆಳ್ತಂಗಡಿ ರಸ್ತೆಯ ಕೆಳಗಿನ ಪೆಟ್ರೋಲ್ ಬಂಕ್ ಬಳಿಯಿಂದ ಬೆನಕ ಆಸ್ಪತ್ರೆ ತನಕದ ರಸ್ತೆ ಚರಂಡಿಯ ದುರಸ್ತಿ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಜೂ.14ರಂದು ಸಂಜೆಯಿಂದ ಆರಂಭಿಸಲಾಗಿದೆ.
ಜೂ.13ರಂದು ಮಧ್ಯಾಹ್ನ ಭಾರಿ ಮಳೆ ಸುರಿದ ಪರಿಣಾಮ ಇಲ್ಲಿನ ಸುಮಾರು 500 ಮೀ.ದೂರದ ರಸ್ತೆಯಲ್ಲಿ ನೀರು ಹರಿದು ನದಿಯಂತಾಗಿತ್ತು. ಸುಮಾರು ಒಂದು ತಾಸು ಕಾಲ ಇದೇ ಪರಿಸ್ಥಿತಿ ಮುಂದುವರಿದು ವಾಹನ ಸವಾರರು, ಪಾದಚಾರಿಗಳು ಭಾರಿ ಸಂಕಷ್ಟ ಅನುಭವಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಗಳ ಮುಂಭಾಗದವರೆಗೂ ನೀರು ನುಗ್ಗಿ ರಸ್ತೆಯುದ್ದಕ್ಕೂ ಒಂದೂವರೆಗಿಂತ ಹೆಚ್ಚಿನ ನೀರು ಹರಿದಿತ್ತು ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಚರಂಡಿ ದುರಸ್ತಿ ಕಾಮಗಾರಿ ಆರಂಭ :
ಇಲ್ಲಿನ ಚರಂಡಿ ದುರಸ್ತಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಆರಂಭಿಸಿದ್ದು ಚರಂಡಿಗಳಲ್ಲಿ ಬೆಳೆದಿರುವ ಭಾರಿ ಗಾತ್ರದ ಗಿಡಗಂಟಿ, ಹೂಳು,ತ್ಯಾಜ್ಯ ಇತ್ಯಾದಿಗಳ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ. ಚರಂಡಿಗಳಲ್ಲಿ ತುಂಬಿದ್ದ ಹೂಳು, ತ್ಯಾಜ್ಯ ತೆರೆವುಗೊಳಿಸಿ, ಬ್ಲಾಕ್ ಆಗಿದ್ದ ಮೋರಿಗಳನ್ನು ಬಿಡಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿ ಸಮರ್ಪಕವಾಗಿ ನಡೆದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬರದು ಎಂಬ ಆಶಾಭಾವನೆ ವ್ಯಕ್ತವಾಗಿದೆ.
ತ್ಯಾಜ್ಯದ ರಾಶಿ:
ಜೆಸಿಬಿ ಮೂಲಕ ಚರಂಡಿ ದುರಸ್ತಿ ಆರಂಭಿಸುತ್ತಿದ್ದಂತೆ ಮೋರಿಗಳು ಬ್ಲಾಕ್ ಆಗಲು ಕಾರಣವಾಗಿದ್ದ ತ್ಯಾಜ್ಯದ ರಾಶಿ ಹರಿದಿದೆ. ಪ್ಲಾಸ್ಟಿಕ್, ಬಾಟಲಿ,ಗೋಣಿ ಕಟ್ಟು ಗಳಲ್ಲಿ ತಂದು ಹಾಕಿದ್ದ ಹಾಗೂ ಮಳೆ ನೀರಿನಲ್ಲಿ ಬಂದು ಸಿಲುಕಿದ ತ್ಯಾಜ್ಯ ರಾಶಿ ರಾಶಿಯಾಗಿ ಕಂಡು ಬಂದಿದೆ. ಚರಂಡಿ, ಮೋರಿಗಳಲ್ಲಿ ತುಂಬಿದ ತ್ಯಾಜ್ಯ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿರುವುದು ಸ್ಪಷ್ಟಗೊಂಡಿದೆ.
ಸದಾ ವಾಹನಗಳ ತಿರುಗಾಟ ಇರುವ ಜನನಿಬೀಡ ಪ್ರದೇಶದಲ್ಲಿ ಇಷ್ಟೊಂದು ತ್ಯಾಜ್ಯ ಕಂಡು ಬಂದಿರುವುದು ವಿಪರ್ಯಾಸವಾಗಿದೆ. ಇದನ್ನು ಯಾರು ಇಲ್ಲಿ ತಂದು ಹಾಕಿರಬಹುದು ಅಥವಾ ಇದು ಎಲ್ಲಿಂದ ಈ ರೀತಿ ಹರಿದು ಬಂದಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಚರಂಡಿಗಳಲ್ಲಿ ಫೋನ್ ಕೇಬಲ್ ಗಳು ಇದ್ದು ಇವುಗಳಿಗೆ ಬಂದು ಸಿಲುಕುವ ತ್ಯಾಜ್ಯ ಕೂಡ ಮಳೆ ನೀರು ಹರಿಯಲು ಅಡ್ಡಿ ಉಂಟು ಮಾಡುತ್ತಿದೆ.
ಸ್ವಚ್ಛತೆ ಬಗ್ಗೆ ವಿಶೇಷ ಗಮನ ನೀಡುತ್ತಿರುವ ಉಜಿರೆ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ವಾಹನದ ಮೂಲಕ ಕಸ ಸಂಗ್ರಹಿಸುತ್ತದೆ.ಜತೆಗೆ ಸಾಕಷ್ಟು ಸ್ವಚ್ಛತೆ ಬಗೆಗೆ ಅರಿವು ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತದೆ.ಆದರೂ ಈ ಪ್ರದೇಶದಲ್ಲಿ ಕಂಡುಬಂದಿರುವ ತ್ಯಾಜ್ಯದ ರಾಶಿ ಪಂಚಾಯಿತಿಯ ನಿದ್ದೆಗೆಡಿಸಿದೆ.
ಸಾಂಕ್ರಾಮಿಕ ರೋಗ ಸಾಧ್ಯತೆ: ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯದಿಂದ ಇದು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಸ್ಥಳೀಯವಾಗಿ ಸಾಕಷ್ಟು ಅಂಗಡಿ, ಮನೆಗಳು ಇದ್ದು ಚರಂಡಿಯ ತ್ಯಾಜ್ಯ ಗಬ್ಬುನಾರುತ್ತಿದೆ. ಪರಿಸರದಲ್ಲಿ ಸೊಳ್ಳೆಗಳ ಕಾಟವು ಇದ್ದು ಇದು ಮಲೇರಿಯಾ,ಡೆಂಗೆ ಮೊದಲಾದ ಸಾಂಕ್ರಾಮಿಕ ರೋಗಗಳನ್ನು ಹರಡಲು ಕಾರಣವಾಗುವ ಭೀತಿ ಎದುರಾಗಿದೆ. ಸದ್ಯ ಇಲ್ಲಿನ ತ್ಯಾಜ್ಯವನ್ನು ಜೆಸಿಬಿ ಮೂಲಕ ಮೇಲೆತ್ತಿ ಲಾರಿಗಳಲ್ಲಿ ಸ್ಥಳಾಂತರಿಸಲಾಗಿದೆಯಾದರೂ ಚರಂಡಿಗಳ ಒಳಗೆ ಸಿಲುಕಿರುವ ತ್ಯಾಜ್ಯ ಮೇಲ್ಭಾಗದಿಂದ ಹರಿದು ಬಂದು ಮತ್ತೆ ಮತ್ತೆ ಸಮಸ್ಯೆ ಎದುರಾಗುವ ಸಾಧ್ಯತೆಯು ಇದೆ.