ಬೆಳ್ತಂಗಡಿ: ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ನೋಂದಣಿ ಜೂನ್ 18 ರಿಂದ ಆರಂಭಗೊಳ್ಳಲಿದೆ. ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ತಮ್ಮ ಹೆಸರು ನೋಂದಾಯಿಸಬಹುದು. ಈ ತಂತ್ರಾಂಶವನ್ನು ಮೊಬೈಲ್, ಕಂಪ್ಯೂಟರ್, ಲ್ಯಾಪ್‍ಟಾಪ್ ಗಳ ಮೂಲಕ ಕೂಡ ಬಳಸಬಹುದಾಗಿದೆ.
ಫಲಾನುಭವಿಗಳ ಆಧಾರ್ ಕಾರ್ಡ್, ಗ್ರಾಹಕರ ಐಡಿಗಳ ಮಾಹಿತಿಯನ್ನು ನೋಂದಣಿ ಸಮಯದಲ್ಲಿ ನೀಡಬೇಕು. ಬೆಂಗಳೂರು ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಚೇರಿಗಳಲ್ಲಿಯೂ ನೋಂದಾಯಿಸಬಹುದು.
ಗೃಹಜ್ಯೋತಿ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‍ಗಳ ವರೆಗೆ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ ಯೂನಿಟ್ ಗಳ ಮೇಲೆ ಶೇ. 10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿರುತ್ತಾರೆ.
ಈ ಯೋಜನೆಯು ಆಗಸ್ಟ್ 1ರಿಂದ ಜಾರಿಗೆ ಬರಲಿದ್ದು, ಅರ್ಹ ಫಲಾನುಭವಿಗಳು ಆಗಸ್ಟ್ 1ರಿಂದ ಶೂನ್ಯ ಬಿಲ್ಲು ಪಡೆಯಲಿದ್ದಾರೆ. ಹೆಚ್ಚಿನ ಮಾಹಿತಿಗೆ ವಿದ್ಯುತ್ ಶಕ್ತಿ ಕಚೇರಿ ಅಥವಾ ಸಹಾಯವಾಣಿ ಸಂಖ್ಯೆ: 1912 ಅನ್ನು ಸಂಪರ್ಕಿಸಬಹುದು ಎಂದು ಇಂಧನ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.