ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ಚಾರ್ಮಾಡಿ: ಬಸ್ ನಿರ್ವಾಹಕ ವಿದ್ಯಾರ್ಥಿಗಳನ್ನು ಬಸ್ ಒಳಗೆ ದೂಡಿ ಹಲ್ಲೆ ನಡೆಸಿದ ಎಂಬ ಕಾರಣಕ್ಕೆ ಬಸ್ಸ ನ್ನು ಚಾರ್ಮಾಡಿ ಬಳಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರು ತಡೆಹಿಡಿದು ಗಲಾಟೆ ನಡೆಸಿದ ಘಟನೆ ಜೂ . 17ರಂದು ಸಂಜೆ ನಡೆದಿದೆ.

ಮಂಗಳೂರಿನಿಂದ ಮೂಡಿಗೆರೆಗೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್ ಗೆ ಉಜಿರೆಯಲ್ಲಿ ಹತ್ತುವ ವೇಳೆ ನಿರ್ವಾಹಕ ವಿದ್ಯಾರ್ಥಿಗಳನ್ನು ದೂಡಿ ಹಲ್ಲೆ ನಡೆಸಿರುವುದಾಗಿ ಹೇಳಿ ಅವರು ನಿರ್ವಾಹಕನ ಜತೆ ರಂಪಾಟ ನಡೆಸಿದ್ದಾರೆ. ಬಳಿಕ ಬಸ್ ಚಾರ್ಮಾಡಿ ಚೆಕ್ ಪೋಸ್ಟ್ ಗೆ ತಲುಪುವ ಸಮಯ ಅಲ್ಲಿಯ ಸ್ಥಳೀಯರು ಜಮಾಯಿಸಿ ಬಸ್ಸನ್ನು ತಡೆಹಿಡಿದು ಗಲಾಟೆ ಆರಂಭಿಸಿದರೆನ್ನಲಾಗಿದೆ .

ಈ ಸಮಯ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.ಆದರೆ ಈ ಸಂದರ್ಭ ಬಸ್ ನಲ್ಲಿದ್ದ ಪ್ರಯಾಣಿಕ ವಿದ್ಯಾರ್ಥಿಗಳು ಮತ್ತು ಸ್ಥಳೀಯರಲ್ಲಿ ಒಂದಿಷ್ಟು ಮಾತಿನ ಚಕಮಕಿ ನಡೆದು , ಹಲ್ಲೆ ನಡೆಸಲು ಮುಂದಾದ ತಂಡ, ಅವಾಚ್ಯ ಶಬ್ದಗಳಿಂದ ನಿಂದಿಸಿದೆ ಎನ್ನಲಾಗಿದೆ. ಈ ಘಟನೆಯನ್ನು ಸ್ಥಳಿಯರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.-

ಪೊಲೀಸರ ಆಗಮನ:

ಘಟನೆಯ ಬಗ್ಗೆ ಮಾಹಿತಿ ಪಡೆದ ಧರ್ಮಸ್ಥಳ ಪಿಎಸ್ ಐ ಅನಿಲ್ ಕುಮಾರ್ ಮತ್ತು ತಂಡದವರು ಸ್ಥಳಕ್ಕೆ ಆಗಮಿಸಿ ಬಸ್ ಸಿಬಂದಿ,ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಜತೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು . ಘಟನೆಯಿಂದ ಸುಮಾರು 90 ಕ್ಕಿಂತ ಅಧಿಕ ಮಂದಿ ಪ್ರಯಾಣಿಕರಿದ್ದ ಬಸ್ ಚಾರ್ಮಾಡಿಯಿಂದ ಒಂದೂವರೆ ಗಂಟೆಯಷ್ಟು ಕಾಲ ವಿಳಂಬವಾಗಿ ಮೂಡಿಗೆರೆಯತ್ತ ಪ್ರಯಾಣ ಮುಂದುವರಿಸಿತು. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Leave a Comment

error: Content is protected !!