ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ 2023 – 24ನೇ ಶೈಕ್ಷಣಿಕ ವರ್ಷದ ಪೋಷಕರ ಸಮಾವೇಶವು ಜರಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಜಿರೆ ಶ್ರೀಧ. ಮ. ಪಿ. ಯು. ವಸತಿ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ರವರು ಮಾತನಾಡುತ್ತಾ, ಮಕ್ಕಳ ಬೇಡಿಕೆಗಳನ್ನೆಲ್ಲಾ ಪೂರೈಸುವುದು ಶೈಕ್ಷಣಿಕ ಪ್ರೋತ್ಸಾಹವಲ್ಲ. ನಾವು ಹೊಂದುವ ವಸ್ತುಗಳಿಂದ ಸುಖ ಸಿಗಲಾರದು. ಪರಸ್ಪರ ಮನುಷ್ಯ ಸಂಬಂಧಗಳನ್ನು ಬೆಸೆಯುವುದರಲ್ಲಿ ಸುಖ ಲಭ್ಯವಾಗುತ್ತದೆ. ಅದಕ್ಕಾಗಿ ಶಾಲೆಗಳು ಅಂಕ ತೆಗೆಯುವ ಕೇಂದ್ರವಾಗದೆ ಸಂಸ್ಕಾರ ಬೆಳೆಸುವ ಕೇಂದ್ರವಾಗಬೇಕು ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸುಲೈಮಾನ್ ಭೀಮಂಡೆಯವರು ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಶೈಕ್ಷಣಿಕ ಮಾಹಿತಿಗಳೊಂದಿಗೆ ಪ್ರಸ್ತಾವನೆ ಗೈದರು.
ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘಕ್ಕೆ ಶೈಕ್ಷಣಿಕ ವರ್ಷದ ನೂತನ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಜರಗಿತು. ನೂತನ ಅಧ್ಯಕ್ಷರಾಗಿ ಶೇಖರ ಗೌಡ ಕೊಲ್ಲಿಮಾರ್ ರವರು ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ರವಿಚಂದ್ರ ಜೈನ್ ರವರು ನೆರವೇರಿಸಿದರು. ಸಮಾರಂಭದ ವೇದಿಕೆಯಲ್ಲಿ ಶಿಕ್ಷಕರಾದ ಕೃಷ್ಣಾನಂದ, ಗಣೇಶ್ವರ ಎಂ. , ಶ್ರೀಮತಿ ಚಿತ್ರಾವತಿಯವರು ಉಪಸ್ಥಿತರಿದ್ದರು. ಶ್ರೀಮತಿ ವಾರಿಜ ಎಸ್ ಗೌಡರು ವಾರ್ಷಿಕ ವರದಿ ವಾಚನ ಮಾಡಿ, ಜಗದೀಶ್ ರವರು ಸ್ವಾಗತಿಸಿದರು. ರಾಜಶ್ರೀ ವಂದಿಸಿ, ಸುಮನ್ ಯು ಎಸ್ ರವರು ಕಾರ್ಯಕ್ರಮ ನಿರೂಪಿಸಿದರು.