ಬೆಳಾಲು: ಧರ್ಮ ಮತ್ತು ನೈತಿಕ ಜಾಗೃತಿ ಮೂಲಕ ಭಾರತೀಯ ಸಂಸ್ಕೃತಿಯ ಪ್ರಸಾರ ಮತ್ತು ಬೆಳೆಸುವಲ್ಲಿ ಯಕ್ಷಗಾನ ಕಲೆಯ ಕೊಡುಗೆ ಅಪಾರ. ವಿಶ್ವದಾದ್ಯಂತ ವಿಜೃಂಭಿಸಿದ ಸಮಗ್ರ ಕಲೆ ಇದು. ಯಕ್ಷಗಾನವು ಗೋಡೆಯಾಚೆಗಿನ ಬದುಕಿನ ಅನುಭವವನ್ನು ನೀಡುವ ಕಲೆಯಾಗಿದ್ದು, ಕನ್ನಡ ಭಾಷೆಯನ್ನು ಸ್ಪಷ್ಟ ಮತ್ತು ಶುದ್ಧವಾಗಿ ಬೆಳೆಸುವಲ್ಲಿ ಇದರ ಪಾತ್ರ ಮೇಲ್ ಸ್ತರದ್ದು ಎಂದು ಉಜಿರೆ ಶ್ರೀ ಧ ಮ ಎಜ್ಯುಕೇಶನಲ್ ಸೊಸೈಟಿ(ರಿ.)ಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಬಿ ಸೋಮಶೇಖರ ಶೆಟ್ಟಿಯವರು ಅಭಿಪ್ರಾಯ ಪಟ್ಟರು.
ಶ್ರೀಯುತರು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಬೆಳಾಲು ಗ್ರಾಮ ಪಂಚಾಯತ್ತಿನ ಮಾಜಿ ಸದಸ್ಯರು, ಯಕ್ಷಗಾನ ಕಲಾ ಸಂಘಟಕರೂ ಆದ ದಯಾನಂದ ಮಾಯರವರು ಶುಭಕೋರಿದರು. ವೇದಿಕೆಯಲ್ಲಿ ಯಕ್ಷಗಾನ ನಾಟ್ಯ ಗುರುಗಳಾದ ಪಿ ಲಕ್ಷ್ಮಣ ಗೌಡ ಬೆಳಾಲುರವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಾದ ಲಿಖಿತಾ ಸ್ವಾಗತಿಸಿ, ಜೀವನ್ ಕುಮಾರ್ ವಂದಿಸಿದರು, ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು.