ನ್ಯಾಯತರ್ಪು ಗ್ರಾಮದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಕಿ ಮಾರು ಗದ್ದೆಯಲ್ಲಿ ಸಂಪ್ರದಾಯದಂತೆ ಭತ್ತದ ನಾಟಿಯನ್ನು ನೆರವೇರಿಸಲಾಯಿತು.
ಇಲ್ಲಿ ಬೆಳೆದ ಭತ್ತದ ತೆನೆಗಳನ್ನು ಚೌತಿ ಸಂದರ್ಭ ದೇಗುಲಕ್ಕೆ ಸಮರ್ಪಿಸಿ ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು ಮಾತನಾಡಿ “ಗದ್ದೆಗಳನ್ನು ಹಡಿಲು ಬಿಡದೆ ಸಾಗುವಳಿ ಮಾಡಬೇಕು. ಇಂದು ಗದ್ದೆ ಬೇಸಾಯ ಬಹಳ ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು ಈ ಬಗ್ಗೆ ಯುವಜನತೆ ಹೆಚ್ಚಿನ ಉತ್ಸಾಹ ತೋರಬೇಕು. ನಾವು ತಿನ್ನುವ ಅನ್ನವನ್ನು ನಾವೇ ಬೆಳೆಯಬೇಕಾದ ಅಗತ್ಯವಿದೆ”ಎಂದು ಹೇಳಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳಾದ ದಿನೇಶ ಗೌಡ, ಅಂಬಾ ಬಿ.ಆಳ್ವ, ಉಮೇಶ್ ಕೇಳ್ತಡ್ಕ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.