ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜು.1 ರಂದು ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ , ಪತ್ರಕರ್ತರು ಸಾಮಾಜಿಕ ಬದ್ಧತೆಯಲ್ಲಿ ಕೆಲಸ ಮಾಡುತ್ತಿದ್ದು, ಪತ್ರಕರ್ತರ ಜೀವನಕ್ಕೆ ಭದ್ರತೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ವಿಧಾನ ಸಭಾ ಅಧಿವೇಶನದಲ್ಲಿ ಪ್ರಸ್ತಾವನೆ ಮಾಡುವುದಾಗಿ ಭರವಸೆ ನೀಡಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೃಷಿಕೇಶ್ ಧರ್ಮಸ್ಥಳ ರವರು ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಪ.ರಾ. ಶಾಸ್ತ್ರಿ, ಪತ್ರಕರ್ತರ ಸಂಘದ ಜಿಲ್ಲಾ ಕಾಯ೯ದಶಿ೯ ಭುವನೇಶ್
ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪೈಕಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಾದ ಪೆರ್ಲ ಬೈಪಾಡಿ ಪ್ರೌಢಶಾಲಾ ವಿದ್ಯಾರ್ಥಿನಿ ಕು| ಸುರಕ್ಷಿತ (613), ವೇಣೂರು ಪ್ರೌಢಶಾಲಾ ವಿದ್ಯಾರ್ಥಿನಿ ಕು| ಶ್ರಾವ್ಯಾ (611), ಕಾಯರ್ತಡ್ಕ ಪ್ರೌಢಶಾಲಾ ವಿದ್ಯಾರ್ಥಿನಿ ಕು| ಶರಣ್ಯಾ (609) ಇವರನ್ನು ಸಂಘದ ಪರವಾಗಿ ಪ.ರಾ ಶಾಸ್ತ್ರಿ ಅಭಿನಂದಿಸಿದರು.
ವಿಜಯವಾಣಿ ಪತ್ರಕರ್ತ ಮನೋಹರ ಬಳಂಜ ಮತ್ತು ಶ್ರೀಮತಿ ಲಿಖಿತ ದಂಪತಿ ಕಳೆದ ಆರು ವರ್ಷಗಳಿಂದ ತಮ್ಮ ಪುತ್ರಿ ದಿತಿ ಹೆಸರಿನಲ್ಲಿ ನೀಡುತ್ತಿರುವ ಸಾಂತ್ವನ ನಿಧಿಯಿಂದ ತಾಲೂಕಿನ ಆರು ಮಂದಿ ಬಡ ಕುಟುಂಬದವರ ವೈದ್ಯಕೀಯ ಚಿಕಿತ್ಸೆಗೆ ತಲಾ ರೂ. 5 ಸಾವಿರ ದಂತೆ ನೆರವನ್ನು ಮನೋಹರ ಬಳಂಜ ಇವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.
ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸದಸ್ಯ ಗಣೇಶ್ ಶಿಲಾ೯ಲು ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಚೈತ್ರೇಶ್ ಇಳಂತಿಲ ಸಾಧಕ ವಿದ್ಯಾರ್ಥಿಗಳ ವಿವರ ನೀಡಿದರು.
ಕೋಶಾಧಿಕಾರಿ ತುಕಾರಾಂ ವಂದಿಸಿದರು. ಸದಸ್ಯ ಆರ್. ಎನ್ ಪೂವಣಿ ಸಂದೇಶ ವಾಚಿಸಿದರು.
ಕಾಯ೯ಕ್ರಮದಲ್ಲಿ ತಾ.ಪಂ ವ್ಯವಸ್ಥಾಪಕ ಪ್ರಶಾಂತ್ ಬಳಂಜ, ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ತಾ.ಪಂ. ಸಂಯೋಜಕ ಜಯಾನಂದ ಲಾಯಿಲ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.