ಜು.6 : ಬೆಳ್ತಂಗಡಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ ನ ಈ ವರ್ಷದ ಚಟುವಟಿಕೆಗಳು ನೂತನ ಪದಾಧಿಕಾರಿಗಳ ಪದಗ್ರಹಣದೊಂದಿಗೆ ಆರಂಭವಾಗಲಿದ್ದು, ಜು. 6 ರಂದು ಸಂಜೆ 7 ಘಂಟೆಗೆ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಂಪನ್ನಗೊಳ್ಳಲಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ.ಅನಂತ ಭಟ್ ಮಚ್ಚಿಮಲೆ ಹೇಳಿದರು.
ಅವರು ಜು. 3 ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸಮಾಜಸೇವಾ ಉದ್ದೇಶದಿಂದ ಸ್ಥಾಪಿತವಾದ ರೋಟರಿ ಸಂಘಟನೆಗೆ ಶತಮಾನದ ಇತಿಹಾಸ ಇದೆ. ರೋಟರಿಯು ಇಂದು ಜಾಗತಿಕವಾಗಿ ಸುಮಾರು 200 ದೇಶಗಳಲ್ಲಿ 35000 ಕ್ಲಬ್ಬುಗಳಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಸದಸ್ಯರ ಮೂಲಕ ಮನುಕುಲದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಾರ್ಥಕ ಸೇವೆಯ ಐದು ದಶಕಗಳನ್ನು ಪೂರೈಸಿರುವ ಬೆಳ್ತಂಗಡಿ ರೋಟರಿ ಕ್ಲಬ್‌ ಮಂಗಳೂರು ಉತ್ತರ ರೋಟರಿ ಕ್ಲಬ್ಬಿನ ಪ್ರಾಯೋಜಕತ್ವದಲ್ಲಿ 52 ವರ್ಷಗಳ ಹಿಂದೆ 22-12-1971 ರಲ್ಲಿ ತನ್ನ ಸೇವಾ ಕಾರ್ಯಕ್ರಮಗಳನ್ನು ಆರಂಭಿಸಿತು.
ಬೆಳ್ತಂಗಡಿಯ ಖ್ಯಾತ ನ್ಯಾಯವಾದಿ ಹಾಗೂ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸ್ಥಾಪಕ ಪ್ರಾಂಶುಪಾಲರಾದ ಪ್ರೊ.ಎನ್.ಜೆ. ಕಡಂಬರು ಸ್ಥಾಪಕ ಅಧ್ಯಕ್ಷರಾಗಿ, ಸುಧೀರ್.ಜಿ.ಭಿಡೆಯವರು ಸ್ಥಾಪಕ ಕಾರ್ಯದರ್ಶಿಯಾಗಿ ಇದರ ಜವಾಬ್ದಾರಿಯನ್ನು ಆಗ ಯಶಸ್ವಿಯಾಗಿ ನಿರ್ವಹಿಸಿದ್ದರು.

ಬೆಳ್ತಂಗಡಿ ರೋಟರಿ ಸಂಸ್ಥೆ ಕಳೆದ 52 ವರ್ಷಗಳಲ್ಲಿ ತಾಲೂಕಿನಾದ್ಯಂತ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಜನಪರ ಕೆಲಸ ಮಾಡುವ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗಡೆಯವರು ಗೌರವ ಸದಸ್ಯರಾಗಿರುವ ನಮ್ಮ ಈ ಸಂಸ್ಥೆಯು ಇಂದು ನಮ್ಮ ತಾಲೂಕಿನಲ್ಲಿ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ 80 ಸಾಧಕರನ್ನು ಸದಸ್ಯರಾಗಿ ಹೊಂದಿದೆ. ನಮ್ಮೊಂದಿಗೆ ರೋಟರಿ ಸಹ ಸಂಸ್ಥೆಗಳಾಗಿ 4 ರೋಟರಿ ಸಮುದಾಯ ದಳಗಳು, 8 ಇಂಟರಾಕ್ಟ್ ಕ್ಲಬ್ಬುಗಳು, 2 ರೋಟರಾಕ್ಟ್ ಕ್ಲಬ್ಗಳು ಹಾಗೂ ಆನ್ ಕ್ಲಬ್ ಸೇವಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿದ್ದಾರೆ ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ನಮ್ಮ ಕ್ಲಬ್ಬಿನ ಸಾರಥ್ಯವನ್ನು ವಹಿಸಿದ್ದ ರೊ.ಮನೋರಮಾ ಭಟ್, ರೂ ರಕ್ಷಾ ರಾಘೋಶ್ ಹಾಗೂ ಅವರ ತಂಡ ಅತ್ಯುತ್ತಮ ಸೇವಾ ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಂಡು ನಮ್ಮ ಜಿಲ್ಲಾ ಸಮ್ಮೇಳನದಲ್ಲಿ ಪ್ಲಾಟಿನಂ+ ಕಾರ್ಡಿನೊಂದಿಗೆ ಪುರಸ್ಕೃತಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಬೆಳ್ತಂಗಡಿ ರೋಟರಿ ಕ್ಲಬ್ಬಿನ 53 ನೇ ವರ್ಷದ ಅಧ್ಯಕ್ಷರಾಗಿ ರೂ.ಅನಂತ ಭಟ್ ಮಚ್ಚಿಮಲೆ, ಕಾರ್ಯದರ್ಶಿಯಾಗಿ ರೂ.ವಿದ್ಯಾಕುಮಾರ್‌ ಕಾಂಚೋಡ್, ಖಜಾಂಚಿಯಾಗಿ ರೂ.ಅಬೂಬ್ಬಕ್ಕರ್, ದಂಡಪಾಣಿಯಾಗಿ ರೊ.ಕಿರಣ್ ಹೆಬ್ಬಾರ್, ಹಾಗೂ ನಿರ್ದೇಶಕರಾಗಿ ರೂ. ರೊನಾಲ್ಡ್ ಲೋಬೋ, ಶ್ರೀನಾಥ್, ಕೆ,ಎಂ, ಡಾ.ರಾಘವೇಂದ್ರ ಪಿದಮಲೆ, ಡಾ.ಎ.ಜಯಕುಮಾರ ಶೆಟ್ಟಿ, ಸಂದೇಶ್ ರಾವ್, ಪಲ್ಸ್
ಪೋಲಿಯೋ ಚಯರ್ ಮನ್ ಆಗಿ ಡಾ.ಶಶಿಧರ ಡೋಂಗ್ರೆ, ಟಿ.ಆರ್.ಎಫ್ ಚಯರ್ ಮನ್ ಆಗಿ ಮೇಜರ್ ಜನರಲ್(ನಿ) ಎಂ.ವಿ.ಭಟ್ ಇವರುಗಳು ಜು. 06ರಂದು ಗುರುವಾರ ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದಲ್ಲಿ ರೋಟರಿ ಜಿಲ್ಲೆಯ ನಿಯೋಜಿತ ಗವರ್ನರ್ ರೂ.ವಿಕ್ರಮ್ ದತ್ತಾ, ಸಹಾಯಕ ಗವರ್ನರ್ ರೂ.ಡಾ.ರಮೇಶ್ ಹಾಗೂ ವಲಯ ಸೇನಾನಿ ರೊ.ಯಶವಂತ ಪಟ್ಟಿರ್ಧನ್ ಅವರ ಉಪಸ್ಥಿತಿಯಲ್ಲಿ ಅಧಿಕಾರವನ್ನು ವಹಿಸಲಿದ್ದಾರೆ ಎಂದರು.

ನಮ್ಮ ಸೇವಾ ಕಾರ್ಯಕ್ರಮಗಳು:
ಬೆಳ್ತಂಗಡಿ ರೋಟರಿಯು ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿಸರ ಸಂವರ್ಧನಾ ಅಭಿಯಾನ, ಆರೋಗ್ಯ ಜಾಗೃತಿ ಶಿಬಿರ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳು ಹೀಗೆ ವಿವಿಧ ಆಯಾಮಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ.

“ಜಗತ್ತಿನಲ್ಲಿ ಭರವಸೆಯನ್ನು ಮೂಡಿಸೋಣ” ಎಂಬ ಧೈಯವಾಕ್ಯದೊಂದಿಗೆ ಈ ವರ್ಷ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಿಂದ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ.

ನಮ್ಮ ಜಿಲ್ಲಾ ಗವರ್ನರ್ ಅವರ ಕಲ್ಪನೆಯಂತೆ ರೋಟರಿ ಬೆಂಗಳೂರು ಇಂದಿರಾನಗರ ಹಾಗೂ ಕ್ಯಾನ್ ಫಿನ್ ಹೋಮ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಾಲೂಕಿನ ಅಂಗನವಾಡಿಗಳ ಹಾಗೂ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಾಲೆಗಳಿಗೆ ಕಲಿಕಾ ಉಪಕರಣಗಳ ಕೊಡುಗೆ, ಶಾಲೆಗಳಗೆ ಸೋಲಾರ್ ವಿದ್ಯುದ್ದೀಕರಣ ಅಳವಡಿಸಲಿದ್ದೇವೆ.

ಪರಿಸರ ಜಾಗೃತಿ ಹಾಗೂ ಸಂವರ್ಧನೆಯ ನಿಟ್ಟಿನಲ್ಲಿ ವನಮಹೋತ್ಸವ ಮತ್ತು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಮಳನಡಿಗೆಯೊಂದಿಗೆ ಹಣ್ಣಿನ ಬೀಜಗಳ ಬಿತ್ತನೆಯನ್ನು ಜುಲೈ ತಿಂಗಳಿನಲ್ಲಿ ಅಯೋಜಿಸಲಾಗಿದೆ.

ಮಳೆ ಕೊಯ್ಲು ನೀರಿಂಗಿಸಲು ಸಮುದಾಯದ ಭಾಗವಹಿಸುವಿಕೆಯಿಂದ ಒಡ್ಡುಗಳ ನಿರ್ಮಾಣ, ಸಮುದಾಯ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದ್ದೇವೆ. ತಾಲೂಕಿನ ಶಾಲಾ ಶಿಕ್ಷಕರ ಕೌಶಲ್ಯವರ್ಧನೆಗಾಗಿ ತರಬೇತಿ ಶಿಬಿರದ ಯೋಜನೆ ಮಾಡಲಾಗಿದೆ.

ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಕೊಡುಗೆ, ರಬ್ಬರ್ ಬೆಳೆಗಾರರ ರಾಜ್ಯ ಮಟ್ಟದ ಸಮಾವೇಶ ವನ್ನು ಜನವರಿ ಹಾಗೂ ಹಲಸು ಮತ್ತು ಹಣ್ಣಿನ ಮೇಳವನ್ನು ಮೇ ತಿಂಗಳಲ್ಲಿ ಆಯೋಜಿಸಲಿದ್ದೇವೆ ಎಂದು ತಮ್ಮ ಯೋಜನೆಗಳನ್ನು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಾಯ೯ದಶಿ೯ ವಿದ್ಯಾಕುಮಾರ್ ಕಾಂಚೋಡು, ವಲಯ ಸೇನಾನಿ ಯಶವಂತ ಪಟವಧ೯ನ್ , ರೊ. ಧನಂಜಯ ರಾವ್ ಉಪಸ್ಥಿತರಿದ್ದರು.

Leave a Comment

error: Content is protected !!