ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದಲ್ಲಿ ಜವಾಹರ್ ರೋಜ್ ಗಾರ್ ಯೋಜನೆಯಡಿಯಲ್ಲಿ 1992-93ನೇ ಸಾಲಿನಲ್ಲಿ ನಿರ್ಮಾಣಗೊಂಡು ಗ್ರಾಮದ ಜನರಿಗೆ ಉಪಯೋಗವಾಗುತ್ತಿದ್ದ ಅಂಬೇಡ್ಕರ್ ಭವನ ಇದೀಗ ದುಸ್ಥಿತಿಗೆ ಬಂದು ತಲುಪಿದೆ.
ನಿರ್ಮಾಣಗೊಂಡು ಹಲವಾರು ವರ್ಷಗಳಿಂದ ವಿದ್ಯುತ್ ಸಂಪರ್ಕವನ್ನು ಕಾಣದಿದ್ದರೂ ಗ್ರಾಮದ ಜನರಿಗೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳಿಗೆ ಸಣ್ಣಸಣ್ಣ ಸಭೆಗಳನ್ನು ನಡೆಸಲು ಉಪಯೋಗವಾಗಿ ಸಣ್ಣ ಮಟ್ಟದ ಆದಾಯ ಸಹ ಬರುತ್ತಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಮಳೆಗಾಳಿಗೆ ತುತ್ತಾಗಿ ಒಂದು ಬದಿಯ ಮೇಲ್ಚಾವಣಿ ಕುಸಿದಿದ್ದರೂ ಯಾರೂ ಗಮನಹರಿಸದ ಕಾರಣ ಇದೀಗ ಸಂಪೂರ್ಣ ಕಟ್ಟಡವೇ ನೆಲಸಮವಾಗುವ ಪರಿಸ್ಥಿತಿಗೆ ಬಂದು ತಲುಪಿದೆ. ಸಂಬಂಧಪಟ್ಟವರು ಇತ್ತಕಡೆ ಗಮನಹರಿಸಿ ದುರಸ್ತಿ ಇಲ್ಲವೇ ಅದನ್ನು ನೆಲಸಮಗೊಳಿಸಿ ನೂತನ ಅಂಬೇಡ್ಕರ್ ಭವನ ನಿರ್ಮಿಸಿಕೊಡಬೇಕೆಂದು ಅಶ್ರಫ್ ಕಟ್ಟೆ ಒತ್ತಾಯಿಸಿದ್ದಾರೆ.