ಬೆಳ್ತಂಗಡಿ: ಕರ್ನಾಟಕ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಜು.8 ರಂದು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್ ನಲ್ಲಿ ಒಂದು ಮೆಶಿನ್ ಹಾಳಾಗಿ ನಾಲ್ಕು ತಿಂಗಳಾದರೂ ದುರಸ್ತಿ ಪಡಿಸದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ರೋಗಿಗಳ ಜೊತೆ ಆಸ್ಪತ್ರೆಯ ಸೌಲಭ್ಯಗಳು ದೊರೆಯುವ ಬಗ್ಗೆ ವಿಚಾರಣೆ ನಡೆಸಿದರು.
ರೋಗಿಗಳು ಆಸ್ಪತ್ರೆಯಲ್ಲಿ ಸೌಲಭ್ಯ ದೊರೆಯುವ ಬಗ್ಗೆ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್, ತಾಲೂಕು ಆಡಳಿತಾಧಿಕಾರಿ ಡಾ| ಚಂದ್ರಕಾಂತ್ ಆಸ್ಪತ್ರೆಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಸಚಿವರು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಇದ್ದರೂ ರೋಗಿಗಳ ದಾಖಲಾತಿಯಿಲ್ಲ ತಿಂಗಳಿಗೆ 30 ಹೆರಿಗೆ ಮಾತ್ರ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಇವುಗಳನ್ನು ಹೆಚ್ಚಿಸುವ ಬಗ್ಗೆ ಸೂಚನೆ ನೀಡಿದರು. ಆಸ್ಪತ್ರೆಯಲ್ಲಿ ಇರುವ ವೈದ್ಯರು ಮತ್ತು ಸಿಬ್ಬಂದಿಗಳ ಬಗ್ಗೆ ವಿಚಾರಿಸಿ ಡಯಾಲಿಸಿಸ್ ನ ಈಗಿತನಕ ಅವಧಿ ಮುಗಿದಿದ್ದು, ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು. ಅಲ್ಟ್ರಾ ಸೌಂಡ್ ಮೆಶಿನ್ ಮತ್ತು ಅನಸ್ತೇಶಿಯಾ ವರ್ಕ್ ಸ್ಟೇಶನ್ ಮಾಡಲು ಸೂಚಿಸಿದ್ದೇನೆ . ಹೊಸ ಸಾಮಾಗ್ರಿಗಳು ಬರುತ್ತದೆ. ತಾಲೂಕು ಆಸ್ಪತ್ರೆಯಲ್ಲಿ 60 ಹೆರಿಗೆ ಆಗಬೇಕು ಬೆಳ್ತಂಗಡಿಯಲ್ಲಿ 30 ಮಾತ್ರ ಆಗುತ್ತಿದ್ದು ಹೆಚ್ಚು ಹೆರಿಗೆಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂಎಲ್ ಸಿ ಹರೀಶ್ ಕುಮಾರ್ , ಮಾಜಿ ಶಾಸಕ ವಸಂತ ಬಂಗೇರ, ಬ್ಲಾಕ್ ಕಾಂಗ್ರೇಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಅಬ್ದುಲ್ ರಹಿಮಾನ್ ಪಡ್ಪು, ರಾಜಶೇಖರ ಶೆಟ್ಟಿ, ಸತೀಶ್ ಕಾಶಿಪಟ್ಣ, ಚಿದಾನಂದ ಎಲ್ದಡ್ಕ, ಜಯವಿಕ್ರಮ ಕಲ್ಲಾಪು , ಮೊದಲಾದವರು ಉಪಸ್ಥಿತರಿದ್ದರು.