ಮಡಂತ್ಯಾರು: ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ವಿದ್ಯೆಯನ್ನು ಸಂಪಾದಿಸುವುದೆಂದರೆ ಅದೊಂದು ತಪಸ್ಸು ,ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ.ಶಿಸ್ತಿನಿಂದ ಸಾಧನೆಗೈಲು ಸಾಧ್ಯ. ವಿದ್ಯಾರ್ಥಿಗಳು ತಾವು ವಿದ್ಯಾರ್ಜನೆಗೈಯುತ್ತಿರುವ ಸಂಸ್ಥೆಯನ್ನು ತಮ್ಮ ಮನೆಯಂತೆ ಪ್ರೀತಿ ಕಾಳಜಿಯಿಂದ ಗೌರವಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ದೊರಕುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಾಗ ಸರ್ವತೋಮುಖ ಬೆಳವಣಿಗೆ ಹೊಂದಬಹುದೆಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ|ಜೊಸೆಫ್ ಎನ್.ಎಂ ಹೇಳಿದರು.
ಅವರು ಇತ್ತೀಚೆಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಸ್ತುತ ವರ್ಷದ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ನೂತನ ಸಂಚಾಲಕರಾದ ವಂ|ಡಾ|ಸ್ಟ್ಯಾನಿ ಗೋವಿಯಸ್ ಅಧ್ಯಕ್ಷತೆವಹಿಸಿ “ನಿಷ್ಕಾಮ ಕರ್ಮದಿಂದ ಮಾಡಿದ ಸೇವೆ ಭಗವಂತನಿಗೆ ಪ್ರಿಯವಾಗುವುದು. ಸ್ವಾರ್ಥ ರಹಿತ ಸೇವೆಯನ್ನು ಮಾಡಿದಾಗ ಜೀವನದಲ್ಲಿ ಸಂತೋಷವನ್ನು ಕಾಣಲು ಸಾಧ್ಯ “ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ವಂ|ಜೆರೊಮ್ ಡಿಸೋಜಾ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ನಿರ್ದೇಶಕ ವಿನ್ಸೆಂಟ್ ರೊಡ್ರಿಗಸ್ ಸ್ವಾಗತಿಸಿ, ಉಪನಿರ್ದೇಶಕಿ ಪ್ರಿಯಾ ಜ್ಯೋತಿ ಕುಟಿನ್ಹಾ ವಂದಿಸಿ, ವಿದ್ಯಾರ್ಥಿ ನಾಯಕ ಮಹಮ್ಮದ್ ಇಸಾಕ್ ಅನಿಸಿಕೆ ಹಂಚಿಕೊಂಡರು.
ವಿದ್ಯಾರ್ಥಿಗಳಾದ ಅಫ್ರೀನ್ ತಾಜ್ ಹಾಗೂ ರಕ್ಷಣ್ ಅಡಪ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.