ಬೆಳ್ತಂಗಡಿ: ಆಧುನಿಕ ಕಾಲದಲ್ಲಿ ನವೀನ ಮಾದರಿಯ ಜೀವನ ಕೌಶಲ್ಯಗಳನ್ನು ಅಳವಡಿಸಿಕೊಂಡು ಬದುಕಿನ ಮೌಲ್ಯವನ್ನು ರೂಪಿಸಿಕೊಳ್ಳಬೇಕು ಎಂದು ಉಜಿರೆ ಶ್ರೀ.ಧ.ಮಂಜುನಾಥೇಶ್ವರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ.ಎ.ಜಯಕುಮಾರ ಶೆಟ್ಟಿ ಹೇಳಿದರು.
ಅವರು ವಾಣಿ ಪದವಿ ಪೂರ್ವ ಕಾಲೇಜಿನ 2023-24ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ ಸಂಸ್ಥೆಯ ಅಭಿವೃದ್ಧಿಯ ಕುರಿತು ಚಿಂತನೆ ಮಾಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ಜ್ಞಾನವನ್ನು, ಅವಕಾಶಗಳನ್ನು ಉಪಯೋಗಿಸಿಕೊಂಡು ಭವಿಷ್ಯವನ್ನು ಉತ್ತಮವಾಗಿಸಿಕೊಳ್ಳಬೇಕು. ಗುರು ಹಿರಿಯರ ಮಾರ್ಗದರ್ಶನವನ್ನು ಪಡೆದು ಅಂತರಂಗದಲ್ಲಿ ಜ್ಞಾನವನ್ನು ಹೊಂದಿ, ತಮ್ಮನ್ನು ತಾವು ಹರಿತಗೊಳಿಸುತ್ತಾ, ತಪ್ಪುಗಳನ್ನು ತಿದ್ದುತ್ತಾ ಮುನ್ನಡೆದಾಗ ಜೀವನ ಸಾಕ್ಷಾತ್ಕಾರವಾಗುತ್ತದೆ ಎಂದರು.
ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪಿ.ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಗೌರವಾಧ್ಯಕ್ಷರಾದ ಎಚ್.ಪದ್ಮಗೌಡ, ಪ್ರಧಾನಕಾರ್ಯದರ್ಶಿಗಳಾದ ಗಣೇಶ್ ಗೌಡ, ಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ ರವಿಶಂಕರ್ ಪಿ. ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ ಶ್ರೀಮತಿ ಮೀನಾಕ್ಷಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಉಪಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಎಂ. ಧನ್ಯವಾದವಿತ್ತರು. ಉಪನ್ಯಾಸಕಿ ಶ್ರೀಮತಿ ಪ್ರಜ್ವಲಾ ಕಾರ್ಯಕ್ರಮ ನಿರೂಪಿಸಿದರು.