ಧರ್ಮಸ್ಥಳ ಯೋಜನೆಯ ಕಾರ್ಯಕ್ರಮ: ರಾಜ್ಯಾದ್ಯಂತ 1000 ಶಾಲೆಗಳಿಗೆ ಜ್ಞಾನದೀಪ ಗೌರವ ಶಿಕ್ಷಕರ ನಿಯೋಜನೆ

Suddi Udaya

ಧರ್ಮಸ್ಥಳ: ರಾಜ್ಯಾದ್ಯಂತ ಶಾಲಾ ಶಿಕ್ಷಕರ ಕೊರತೆಯನ್ನು ಗಮನಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸೂಚನೆಯಂತೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 1000 ಶಾಲೆಗಳಿಗೆ ಸಂಸ್ಥೆಯ ವತಿಯಿಂದ ಗೌರವ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆಯೆಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಹೆಚ್. ಮಂಜುನಾಥ್‌ರವರು ತಿಳಿಸಿದರು.


ಗ್ರಾಮೀಣ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರವು ಬಹಳಷ್ಟು ಮಹತ್ವವಾದುದು. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈಗಲೂ ಶಿಕ್ಷಣದ ಬಹಳಷ್ಟು ಅಸಮಾನತೆ ಕಾಣುತ್ತೇವೆ. ಸೂಕ್ತ ಮೂಲ ಸೌಕರ್ಯಗಳ ಕೊರತೆ, ಸಂಪರ್ಕ ವ್ಯವಸ್ಥೆ ಇಲ್ಲದೇ ಇರುವುದು, ಬಡತನ ಮೊದಲಾದವುಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಹಲವು ಜಿಲ್ಲೆಗಳು ಇನ್ನೂ ಶೈಕ್ಷಣಿಕವಾಗಿ ಹಿಂದುಳಿದಿವೆ. ಸರಕಾರಗಳು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅದನ್ನು ಸಂಪೂರ್ಣವಾಗಿ ನೀಗಿಸಲು ಸಾಧ್ಯವಾಗಿರುವುದಿಲ್ಲ. ಇವೆಲ್ಲವುಗಳನ್ನು ಗಮನಿಸಿದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿಯೇ ಕಳೆದ 30 ವರ್ಷಗಳ ಹಿಂದೆ ‘ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ’ ಜಾರಿಗೆ ತಂದರು.
ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣಮಟ್ಟ ಸುಧಾರಣೆ ಹಾಗೂ ಕಲಿಕಾ ವಾತಾವರಣ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರಂತೆ ಶಾಲಾ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿ, ಶೌಚಾಲಯ, ಆಟದ ಮೈದಾನ, ಶಾಲಾ ಆವರಣ, ವಿದ್ಯುದ್ಧೀಕರಣ, ಕುಡಿಯುವ ನೀರು, ರಂಗಮಂದಿರ, ಶಾಲಾ ಕಟ್ಟಡಗಳ ದುರಸ್ತಿ, ಡೆಸ್ಕ್-ಬೆಂಚ್‌ಗಳ ಒದಗಣೆ ಮೊದಲಾದವುಗಳಿಗೆ ಈ ಕಾರ್ಯಕ್ರಮದ ಮೂಲಕ ಸಹಾಯಧನ ನೀಡಲಾಗುತ್ತಿದೆ. ಇದರಂತೆ ಇದುವರೆಗೆ ಒಟ್ಟು ರೂ. 49.70 ಕೋಟಿ ಮೊತ್ತದ ಪೂರಕ ಸಹಾಯಧನ ನೀಡಲಾಗಿದೆ.
ಗ್ರಾಮೀಣ ಶಾಲೆಗಳ ಮೂಲಭೂತ ಸೌಕರ್ಯಗಳ ಸುಧಾರಣೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಶಿಕ್ಷಕರ ಕೊರತೆ ಇರುವ ಸರಕಾರಿ ಹಾಗೂ ಆಯ್ದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರನ್ನು ಒದಗಿಸಿ, ಸಂಸ್ಥೆಯ ವತಿಯಿಂದ ನೆರವು ನೀಡುತ್ತಾ ಬರಲಾಗಿದೆ. ಇದರಂತೆ ಮಕ್ಕಳಿಗೆ ಪ್ರತೀ ದಿನದ ಕಲಿಕೆಯನ್ನು ಈ ಶಿಕ್ಷಕರ ಮೂಲಕ ನೀಡಲಾಗುತ್ತಿದೆ.
ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತವನ್ನು ಗಮನಿಸಿ ತೀರಾ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನಿಯೋಜನೆ ಮಾಡಲಾಗುತ್ತಿದೆ. ಈ ಶಿಕ್ಷಕರ ಸೇವೆಯು ಗ್ರಾಮೀಣ ಶಾಲಾ ಮಕ್ಕಳು ಪಾಠ ಪ್ರವಚನದಿಂದ ವಂಚಿತರಾಗುವುದನ್ನು ತಡೆಗಟ್ಟುವರೇ ಸಂಸ್ಥೆಯ ವತಿಯಿಂದ ರೂಪಿಸಿದ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಈ ಶಿಕ್ಷಕರಿಗೆ ಮಾಸಿಕ ಗೌರವಧನವನ್ನು ಸಂಸ್ಥೆಯ ವತಿಯಿಂದ ಪಾವತಿಸಲಾಗುತ್ತಿದ್ದು, ಇದಕ್ಕಾಗಿಯೇ ಸಂಸ್ಥೆಯಿಂದ ಇದುವರೆಗೆ ಒಟ್ಟು ರೂ. 13.67 ಕೋಟಿ ಮೊತ್ತ ವಿನಿಯೋಗಿಸಲಾಗಿದೆ.
ಜ್ಞಾನದೀಪ ಶಿಕ್ಷಕರ ಮೂಲಕ ವಿದ್ಯಾಭ್ಯಾಸದ ಮಧ್ಯದಲ್ಲಿ ಶಾಲೆ ಬಿಟ್ಟ 6 ರಿಂದ 14 ವರ್ಷ ಪ್ರಾಯದ ಮಕ್ಕಳ ಮನೆ ಸಂದರ್ಶಿಸಿ, ಕಾರಣ ತಿಳಿಯುವುದು ಹಾಗೂ ಕುಟುಂಬದ ಸಂಪರ್ಕ ಬೆಳೆಸಿ ಅವರನ್ನು ಮತ್ತೆ ಶಾಲೆಗೆ ಸೇರ್ಪಡೆಗೊಳಿಸುವುದು ಹಾಗೂ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಶ್ರಮಿಸಲಾಗುವುದು.
ಕಿರಿಯ ಪ್ರಾಥಮಿಕ ಮಟ್ಟದ ಐದನೇ ತರಗತಿ ಮುಗಿದ ಬಳಿಕ ಶಾಲೆ ಬಿಡುವವರ ಮನವೊಲಿಸಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರ್ಪಡೆ ಮಾಡುವರೇ ಪ್ರಯತ್ನಿಸಲಾಗುವುದು.
ಗ್ರಾಮೀಣ ಪ್ರದೇಶದ ಪ್ರತೀ ವಿದ್ಯಾರ್ಥಿಯೂ ವಿದ್ಯಾಭ್ಯಾಸ ಪಡೆಯಲು ಪ್ರೇರಣೆ ನೀಡುವಂತೆ ಹೆತ್ತವರ ಮನವೊಲಿಸಲಾಗುವುದು.
ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಒಟ್ಟು ಹಾಜರಾತಿ ವೃದ್ಧಿಸುವಂತೆ ಕಾರ್ಯಕ್ರಮ ಹಾಕಿಕೊಳ್ಳುವುದು, ಶಾಲೆಯನ್ನು ಆಕರ್ಷಕ ಕೇಂದ್ರವಾಗುವಂತೆ ಮಾಡುವಲ್ಲಿ ಪ್ರಯತ್ನಿಸಲಾಗುವುದು.
ರಾಷ್ಟ್ರೀಯ ದಿನಾಚರಣೆಗಳು, ಶಾಲಾ ವರ್ಧಂತ್ಯುತ್ಸವ, ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ನಡೆಸುವರೇ ಸಹಕರಿಸಲಾಗುವುದು.
ರಾಜ್ಯಾದ್ಯಂತ ವಿವಿಧ ಶಾಲೆಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 1000 ಗೌರವ ಶಿಕ್ಷಕರನ್ನು ನಿಯೋಜಿಸಲಾಗಿದೆ. ಈ ಪೈಕಿ 276 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿರುವುದು ಉಲ್ಲೇಖನೀಯವಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಶಿಕ್ಷಕರು ಆಯಾ ಶಾಲೆಗಳಿಗೆ ಮಹತ್ತರ ಕೊಡುಗೆ ನೀಡಲಿದ್ದಾರೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಹೆಚ್. ಮಂಜುನಾಥ್‌ರವರು ತಿಳಿಸಿರುತ್ತಾರೆ.

Leave a Comment

error: Content is protected !!