ಬೆಳ್ತಂಗಡಿ: ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕು. ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆ ನಡೆ
ಆಗ್ರಹಿಸುವಂತೆ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ ಇದರವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಮಾರು 11 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದ ಪಾಂಗಳ ಚಂದಪ್ಪ ಗೌಡರ ಮಗಳು ಕಾಲೇಜು ವಿಧ್ಯಾರ್ಥಿನಿ ಕು. ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣ ನಡೆದಿದ್ದು ,ಬೆಳ್ತಂಗಡಿ ತಾಲೂಕಿನಾದ್ಯಂತ ಈ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಪ್ರತಿಭಟನೆ ನಡೆದಿದ್ದು ಆ ಕ್ಷಣದಲ್ಲಿ ಇದರ ಆರೋಪಿಗಳು ಪತ್ತೆಯಾಗಿರಲಿಲ್ಲ.
ಆ ನಂತರದಲ್ಲಿ ಈ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದಾಗ ಈ ಪ್ರಕರಣವು ಸಿ.ಬಿ.ಐ.ಗೆ ಹಸ್ತಾಂತರವಾಗಿ ಅವರು ಸಂತೋಷ್ ರಾವ್‌ನನ್ನು ಆರೋಪಿಯನ್ನಾಗಿಸಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇತ್ತೀಚೆಗೆ ನ್ಯಾಯಾಲಯವು ಸದ್ರಿ ಸಂತೋಷ್ ರಾವ್‌ನನ್ನು ನಿರಪರಾದಿ ಎಂದು ದೋಷಮುಕ್ತಗೊಳಿಸಿದ್ದು, ನಮಗೆಲ್ಲರಿಗೂ ತಿಳಿದ ವಿಚಾರವಾಗಿದೆ.
ಕ್ರೂರಿಗಳು ಅತ್ಯಂತ ಅಮಾನುಷವಾಗಿ ಅತ್ಯಾಚಾರ ನಡೆಸಿ ಕೊಲೆಮಾಡಿದ ಈ ಪ್ರಕರಣವು ನಮ್ಮ ತಾಲೂಕಿನಾದ್ಯಂತ ಪ್ರತಿಯೊಬ್ಬರಲ್ಲಿಯೂ ಈ ಬಗ್ಗೆ ಆತಂಕ, ದುಗುಡವಿದ್ದು, ಬಲಿಷ್ಠ, ಪ್ರಬುದ್ದ ಪೋಲಿಸ್ ಇಲಾಖೆ ನಮ್ಮಲ್ಲಿದ್ದೂ, ಈ ಪ್ರಕರಣವನ್ನು ಭೇದಿಸಲಿಲ್ಲ ಆ ಕುಟುಂಬಕ್ಕೆ ನ್ಯಾಯದೊರೆಯಲಿಲ್ಲ ಎಂದು ಹತಾಶರಾಗಿರುತ್ತಾರೆ.
ನೈಜ ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸದಿದ್ದರೆ ನ್ಯಾಯಾಂಗದ ಬಗ್ಗೆ ನಮ್ಮಲ್ಲಿನ ಭರವಸೆಯೂ ಹುಸಿಯಾಗುತ್ತದಲ್ಲದೆ. ಸಮಾಜದಲ್ಲಿ ಜಾಗೃತಿ ಮೂಡಿಸಿ ಸುಸಂಸ್ಕೃತ ಸಮಾಜವನ್ನು ರೂಪಿಸುವಲ್ಲಿ ನಮ್ಮ ಜವಾಬ್ದಾರಿಯೂ ಇರಬೇಕಾಗಿದ್ದು ಇದನ್ನು ಪುನಃ ತನಿಖೆಗೆ ಒಳಪಡಿಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಸಮಾಜಕ್ಕೆ ಸೂಕ್ತ ಸಂದೇಶ ಈ ಮೂಲಕ ರವಾನೆಯಾಗಬೇಕು . ಆದ್ದರಿಂದ ಈ ಪ್ರಕರಣವನ್ನು ಮರುತನಿಖೆಗೆ ಆಗ್ರಹಿಸುವಂತೆ ನಮ್ಮ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.