33.4 C
ಪುತ್ತೂರು, ಬೆಳ್ತಂಗಡಿ
March 28, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ: ಅನುಚಿತ ವರ್ತನೆ, ಹಲ್ಲೆ ಆರೋಪ: ಕೊಕ್ಕಡ ಹಾಗೂ ನೆಲ್ಯಾಡಿ ಮಹಿಳೆಯರಿಂದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಕೊಕ್ಕಡ: ಅನುಚಿತವಾಗಿ ವರ್ತಿಸಿದ ಪತಿಯ ಸ್ನೇಹಿತನ ವಿಚಾರಣೆಗೆ ಆತನ ಮನೆಗೆ ಪತಿಯ ಜೊತೆ ತೆರಳಿದ್ದ ವೇಳೆ ತಲವಾರು ತೋರಿಸಿ ಜೀವಬೆದರಿಕೆಯೊಡ್ಡಿ, ವಸ್ತ್ರವನ್ನು ಹರಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನೆಲ್ಯಾಡಿಯ ಮಹಿಳೆಯೋರ್ವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಕ್ಕಡದ ಮಹಿಳೆಯೋರ್ವರು ಧರ್ಮಸ್ಥಳ ಠಾಣೆಗೆ ಪ್ರತಿ ದೂರು ನೀಡಿದ್ದು ಮನೆಗೆ ಅಕ್ರಮ ಪ್ರವೇಶಿಸಿ ಅವಾಚ್ಯವಾಗಿ ಬೈದು, ಅನುಚಿತವಾಗಿ ವರ್ತಿಸಿ ಪತಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಕೊಣಾಲು ನಿವಾಸಿಯಾಗಿದ್ದು ಪ್ರಸ್ತುತ ನೆಲ್ಯಾಡಿಯಲ್ಲಿ ವಾಸವಿರುವ ಜೀವನ್ ಎಂಬವರ ಪತ್ನಿ ಡೆಲಿಶಾ ಡೆಸಾ (23ವ.) ಹಾಗೂ ಕೊಕ್ಕಡ ಹಾರಮನೆ ನಿವಾಸಿ ಲಕ್ಷ್ಮೀನಾರಾಯಣ ಎಂಬವರ ಪತ್ನಿ ಡಾಲಿ ದೂರು ನೀಡಿದವರಾಗಿದ್ದಾರೆ.

ಡೆಲಿಶಾ ಡೆಸಾ ಅವರು ನೀಡಿದ ದೂರಿನಲ್ಲಿ ನಾನು ಪ್ರತೀ ದಿನ ನೆಲ್ಯಾಡಿಯಿಂದ ಮಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದು ಕೆಲ ದಿನದ ಹಿಂದೆ ಕೆಲಸ ಮುಗಿಸಿ ಮನೆಗೆ ಹೋಗುವರೇ ನೆಲ್ಯಾಡಿಯಲ್ಲಿರುವ ವೇಳೆ ಪತಿಯ ಸ್ನೇಹಿತ ಲಕ್ಷ್ಮೀನಾರಾಯಣ ಎಂಬವರು ಅನುಚಿತವಾಗಿ ವರ್ತಿಸಿ, ಅಸಭ್ಯವಾಗಿ ಮಾತನಾಡುತ್ತಿದ್ದರು.


ಈ ಬಗ್ಗೆ ಗಂಡನ ಬಳಿ ತಿಳಿಸಿ, ನಾನು, ಪತಿ ಜೀವನ್ ಹಾಗೂ ಕಾರಿನಲ್ಲಿ ಚಾಲಕರಾಗಿ ಸುರೇಶ್ ಎಂಬವರನ್ನು ಕರೆದುಕೊಂಡು ಲಕ್ಷ್ಮಿನಾರಾಯಣ ಅವರ ಮನೆಗೆ ತೆರಳಿ ವಿಚಾರಿಸಿದಾಗ ಅವರು ತಲವಾರು ತೋರಿಸಿ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿದ್ದಾರೆ. ಅಲ್ಲದೇ ವಸ್ತ್ರವನ್ನು ಹರಿದು ನನಗೆ ಹಾಗೂ ಪತಿಗೆ ದೊಣ್ಣೆ ಮತ್ತು ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಡೆಲಿಶಾ ಡೆಸಾ ಹಾಗೂ ಅವರ ಪತಿ ಜೀವನ್ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ಡೆಸಾ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 354(A)506(2) 323, 324 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಪ್ರತಿದೂರು: ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಕ್ಕಡ ಹಾರಮನೆ ನಿವಾಸಿ ಲಕ್ಷ್ಮೀನಾರಾಯಣ ಎಂಬವರ ಪತ್ನಿ ಡಾಲಿ ಎಂಬವರು ಧರ್ಮಸ್ಥಳ ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ. ಆ.7ರಂದು ಸಂಜೆ ನಾನು ಹಾಗೂ ಗಂಡ ಮನೆಯಲ್ಲಿರುವಾಗ ಪರಿಚಯದ ಜೀವನ್ ಮತ್ತು ಸುರೇಶ್ ಎಂಬವರು ಮನೆಗೆ ಅಕ್ರಮ ಪ್ರವೇಶ ಮಾಡಿದ್ದು, ಈ ಪೈಕಿ ಜೀವನ್ ಎಂಬವರು ನನ್ನನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು, ನನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಈ ವೇಳೆ ಪತಿಗೆ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದು ಚಿಕಿತ್ಸೆಗಾಗಿ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಡಾಲಿ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 448, 504, 354, 324, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Related posts

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ “ಮನೆ ಮನೆಗೆ ಗಂಗಾಜಲ”

Suddi Udaya

ಭಾರಿ ಸಿಡಿಲು ಮಳೆ: ಕೊಯ್ಯೂರು ತೆಂಗಿನ ಮರಕ್ಕೆ ಸಿಡಿಲು ಬಡಿದು ಉರಿದ ಬೆಂಕಿ

Suddi Udaya

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಷ್ಟ್ರಮಟ್ಟದ ಅತ್ಯುತ್ತಮ ಸಾಹಸ ಪ್ರವಾಸಿ ತಾಣ ಪ್ರಶಸ್ತಿ ಗೆದ್ದ ಕುತ್ಲೂರು ಗ್ರಾಮದ ಪ್ರತಿನಿಧಿಗಳಿಗೆ ಗೌರವಾರ್ಪಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಣಪತಿ ಗುಡಿಯ ಸಮರ್ಪಣಾ ಕಾರ್ಯಕ್ರಮ

Suddi Udaya

ಇಂದಬೆಟ್ಟು ಶ್ರೀ ವೀರಭದ್ರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ರಿಲಾಯನ್ಸ್ ಪೈನಾನ್ಸ್ ನಿಂದ 5% ಬಡ್ಡಿ ದರದಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ಬ್ಯಾಂಕ್ ಖಾತೆಯಿಂದ ರೂ.8.40 ಲಕ್ಷ ಪಡೆದು ವಂಚನೆ

Suddi Udaya
error: Content is protected !!