ಬೆಳ್ತಂಗಡಿ: ಜಗತ್ತಿನ ಆತ್ಮವೆನಿಸಿರುವ ಬೇಸಾಯದಲ್ಲಿ ತೊಡಗಿಸಿಕೊಳ್ಳುವುದರಿಂದ ಆಯಾ ಪ್ರದೇಶದ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ದಿವಾ ಕೊಕ್ಕಡ ಹೇಳಿದರು.
ಅವರು ವಾಣಿ ಪದವಿ ಪೂರ್ವ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ನಡೆದ ‘ಆಟಿ ಒಂಜಿ ನೆಂಪು’ ಕಾರ್ಯಕ್ರಮವನ್ನು ಚೆನ್ನೆಮಣೆ ಆಟ ಆಡುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ, ಆಧುನೀಕರಣ ಜೀವನ ಶೈಲಿಯನ್ನು ಬದಲಾಯಿಸುತ್ತಿದೆ. ಕೃಷಿ, ಸಂಸ್ಕೃತಿ, ಪರಿಸರ ಎಲ್ಲವೂ ನಾಶವಾಗುತ್ತಿದೆ. ಆಟಿ ತಿಂಗಳಲ್ಲಿ ಜನರಿಗೆ ಆಹಾರದ ಕೊರತೆಯಾದಾಗ ಪ್ರಕೃತಿಯಲ್ಲಿ ಸಿಗುವ ಎಲೆಗಳನ್ನು, ಗೆಡ್ಡೆಗಳನ್ನು ತಿಂದು ಹಸಿವನ್ನು ನೀಗಿಸುತ್ತಿದ್ದರು. ಇದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಂಡಿದ್ದರಲ್ಲದೆ ರೋಗ ರುಜಿನಗಳಿಂದ ಮುಕ್ತರಾಗಿದ್ದರು. ಜನಪದ ಎನ್ನುವುದು ಜ್ಞಾನಪದವಾಗಿದ್ದು ಬದುಕುವ ಕಲೆಯನ್ನು ತಿಳಿಸುವ ಪ್ರಕಾರವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಚೆನ್ನೆಮಣೆ ಆಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾಲೇಜಿನ ಉಪಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಎಂ ಅಧ್ಯಕ್ಷತೆ ವಹಿಸಿದ್ದರು. ತುಳು ಸಂಘದ ಸಂಯೋಜಕರಾದ ಮಹಾಬಲ ಗೌಡ ಸ್ವಾಗತಿಸಿದರು. ಉಪನ್ಯಾಸಕ ಬೆಳಿಯಪ್ಪ ಕೆ ವಂದಿಸಿದರು. ಉಪನ್ಯಾಸಕಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.