ಲಯನ್ಸ್ ಕ್ಲಬ್ ನಿಂದ ಸ್ವಾತಂತ್ರೋತ್ಸವ ಆಚರಣೆ, ಪ್ರತಿಭಾ ಪ್ರೋತ್ಸಾಹ

Suddi Udaya

ಬೆಳ್ತಂಗಡಿ: ನಮ್ಮ ಕಾರ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡುವುದೇ ದೇಶ ಸೇವೆ. ಭ್ರಷ್ಟಾಚಾರ ಮುಕ್ತ ಸೌಹಾರ್ದ ಭಾರತ ನಮ್ಮ ಗುರಿಯಾಗಿಸೋಣ ಎಂದು ನಿವೃತ್ತ ಸೇನಾನಿ ಕಾಂಚೋಡು ಗೋಪಾಲಕೃಷ್ಣ ಭಟ್ ಹೇಳಿದರು.


ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಲಯನ್ಸ್ ಭವನದಲ್ಲಿ ಮುಸ್ಸಂಜೆ ನಡೆದ ಸ್ವಾತಂತ್ರೋತ್ಸವ ಆಚರಣೆ, ಪ್ರತಿಭಾ ಪ್ರೋತ್ಸಾಹ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಗಲ್ಫ್ ಉದ್ಯಮಿ ಇಸ್ಮಾಯಿಲ್ ಅಬ್ದುಲ್ ಖಾದರ್ ಅವರನ್ನು ಸನ್ಮಾನಿಸಲಾಯಿತು.


ಬಡತನದ ಹಿನ್ನೆಲೆಯಿಂದ ಬಂದು ಎಂ ಕಾಂ ವಿದ್ಯಾಭ್ಯಾಸ ಪಡೆಯುತ್ತಿರುವ ಅರ್ಹ ಕುಟುಂಬದ ಇಬ್ಬರು ಪ್ರತಿಭಾನ್ವಿತೆ ವಿದ್ಯಾರ್ಥಿನಿಯರಿಗೆ ಲಯನ್ಸ್ ವಿದ್ಯಾ ಕಲಿಕಾ ನಿಧಿ ಹಸ್ತಾಂತರಿಸಲಾಯಿತು.
ದಿನದ ಮಹತ್ವದ ಬಗ್ಗೆ ನಿತ್ಯಾನಂದ ನಾವರ, ಹೇಮಂತ ರಾವ್, ವಸಂತ ಶೆಟ್ಟಿ ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಮಾತನಾಡಿ, ಲಯನ್ಸ್ ಸುವರ್ಣ ಮಹೋತ್ಸವದ ಭಾಗವಾಗಿ ಪ್ರತೀ ಸದಸ್ಯರ ಮನೆ ಭೇಟಿ, ಸರಳ ಕಾರ್ಯಕ್ರಮ, ಸಣ್ಣ ದೊಡ್ಡ ಎಂಬ ಭೇದವಿಲ್ಲದೆ ಜಾತಿ ಧರ್ಮದ ಅಂತರವಿಲ್ಲದೆ ಸೇವಾ ಚಟುವಟಿಕೆ ಹಮ್ಮಿಕೊಳ್ಳೋಣ ಎಂದರು.
ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.


ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಅನಂತ ಕೃಷ್ಣ ವರದಿ ವಾಚಿಸಿದರು. ರವೀಂದ್ರ ಶೆಟ್ಟಿ ಬಳಂಜ ವೇದಿಕೆಗೆ ಆಹ್ವಾನಿಸಿದರು. ಲಾಂಗೂಲ ಚಾಲಕ ರಾಮಕೃಷ್ಣ ಗೌಡ ನಗೆಚಟಾಕಿ ನಡೆಸಿದರು. ದೇವಿದಾಸ್ ಶೆಟ್ಟಿ ಧ್ವಜವಂದನೆ ನಡೆಸಿದರು. ಕೋಶಾಧಿಕಾರಿ ಶುಭಾಷಿಣಿ ವಂದಿಸಿದರು.

Leave a Comment

error: Content is protected !!